ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೈಟುಗಳ ಹಂಚಿಕೆಯಲ್ಲಿ ಆಗುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಆಯುಕ್ತರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಒಮದು ಬಿಡಿಎ ಸೈಟ್ ಅನ್ನು ಇಬ್ಬರು, ಮೂವರಿಗೆ ಹಂಚುವ ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.
ಈ ಕುರಿತು ಆಯುಕ್ತ ಕಛೇರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಟಿಪ್ಪಣಿಯೊಂದನ್ನು ಹೊರಡಿಸಿದೆ. ಈ ಟಿಪ್ಪಣಿ ಒಬ್ಬರಿಗೆ ಹಂಚಿಕೆ ಮಾಡಲಾದ ನಿವೇಶನವನ್ನು ಇತರರಿಗೆ ಹಂಚಿಕೆ ಮಾಡಿದ ಪ್ರಕರಣಗಳಲ್ಲಿ ಸಂಬಂಧಿಸಿದ ಅಧಿಕಾರಿಗಳ/ ನೌಕರರ ವಿರುದ್ಧ ಪೊಲೀಸ್ ದೂರು ದಾಖಲಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದ್ದು, ದಿನಾಂಕ 26/3/2026ರಂದು ನಡೆದ ಸಭೆಯಲ್ಲಿನ ನಿರ್ದೇಶನವನ್ನು ಉಲ್ಲೇಖಲಾಗಿದೆ.
ಟಿಪ್ಪಣಿಯ ವಿವರಗಳು: ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆಗಳ ಕೆಲವು ಪ್ರಕರಣಗಳಲ್ಲಿ ಗಂಭೀರ ಲೋಪಗಳು ಕಂಡುಬಂದಿದ್ದು, ಒಂದು ವ್ಯಕ್ತಿಗೆ ಹಂಚಿಕೆ ಮಾಡಲಾಗಿರುವ ನಿವೇಶನವನ್ನು ಮತ್ತೊಬ್ಬರಿಗೆ ಮರುಹಂಚಿಕೆ ಅಥವಾ ನಕಲಿಮಾಡಿರುವ ಘಟನೆಗಳು ಸಂಭವಿಸಿರುವುದು/ ಸಂಭವಿಸುತ್ತಿರುವುದು ಗಮನಕ್ಕೆ ಬಂದಿದೆ.
ಇಂತಹ ಪ್ರಕರಣಗಳಿಂದ ಪ್ರಾಧಿಕಾರಕ್ಕೆ ಕೆಟ್ಟ ಹೆಸರು ತರುವುದಲ್ಲದೆ ಆಡಳಿತಾತ್ಮಕ ದೋಷಗಳಾಗಿ ಪರಿಗಣಿಸಲ್ಪಟ್ಟು, ಗಂಭೀರ ಅನಿಯಮಿತತೆಗಳಿಗೂ ಒಳಪಟ್ಟಿರುತ್ತವೆ. ಆದ್ದರಿಂದ, ಇಂತಹ ಎಲ್ಲಾ ಪ್ರಕರಣಗಳಲ್ಲಿ ಸಂಬಂಧಿಸಿದ ಲೋಪಗಳಿಗೆ ಜವಾಬ್ದಾರರಾಗಿರುವ ನೌಕರರು/ ಅಧಿಕಾರಿಗಳನ್ನು ಗುರುತಿಸಿ, ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿರುತ್ತದೆ.
ಈ ರೀತಿಯ ಲೋಪಗಳು ಮರುಕಳಿಸದಂತೆ ತಡೆಯುವ ದೃಷ್ಟಿಯಿಂದ ಕಟ್ಟುನಿಟ್ಟಿನ ಮೇಲ್ವಿಚಾರಣೆ ಹಾಗೂ ಜವಾಬ್ದಾರಿತನವನ್ನು ಖಚಿತಪಡಿಸುವತ್ತ ಕ್ರಮವಹಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಲೋಪದೋಷ ಎಸಗಿದ ಅಧಿಕಾರಿ/ ನೌಕರರ ವಿರುದ್ಧ ದೂರು ದಾಖಲಿಸಲು ಪ್ರಾಧಿಕಾರದ ಆರಕ್ಷಕ ಅಧೀಕ್ಷಕರಿಗೆ ಕ್ರಮವಹಿಸುವಂತೆ ಕೋರಿದೆ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

