ಬೆಂಗಳೂರು: ನಾಳೆಯಿಂದ ಹೊಸ ಆರ್ಥಿಕ ವರ್ಷ (2026-27) ಆರಂಭವಾಗಲಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ. ಅಗತ್ಯ ಸೇವೆಗಳ ದರ ಏರಿಕೆಯೊಂದಿಗೆ ಹಲವು ಹೊಸ ನಿಯಮಗಳು ಜಾರಿಗೆ ಬರಲಿದ್ದು, ನಿಮ್ಮ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿವೆ.
ರಾಜ್ಯದ ಜನತೆಗೆ ಹೊಸ ಆರ್ಥಿಕ ವರ್ಷದ (2026-27) ಆರಂಭವೇ ಕಹಿಯಾಗಲಿದೆ. ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಅಗತ್ಯ ಸೇವೆಗಳ ದರದಲ್ಲಿ ಭಾರಿ ಏರಿಕೆಯಾಗುತ್ತಿದ್ದು, ನಿಮ್ಮ ಮಾಸಿಕ ಬಜೆಟ್ ಬುಡಮೇಲಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ನೀರಿನ ದರ ಏರಿಕೆಯ ಜೊತೆಗೆ, ರಾಜ್ಯದಾದ್ಯಂತ ವಿದ್ಯುತ್ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಶುಲ್ಕ ಕೂಡ ಹೆಚ್ಚಳವಾಗಲಿದೆ. ಈ ದರ ಏರಿಕೆಯು ಕೇವಲ ನಿಮ್ಮ ಜೇಬಿಗೆ ಕತ್ತರಿ ಹಾಕುವುದಷ್ಟೇ ಅಲ್ಲದೆ, ರೈಲ್ವೆ ಟಿಕೆಟ್ ರದ್ದತಿ ಹಾಗೂ ಹೊಸ ತೆರಿಗೆ ನಿಯಮಗಳ ಮೂಲಕ ಸಾಮಾನ್ಯ ಜನರ ಜೀವನವನ್ನೇ ಇನ್ನಷ್ಟು ದುಬಾರಿಯಾಗಿಸಲಿದೆ.
ಪ್ರಮುಖ ಬದಲಾವಣೆಗಳು ಇಲ್ಲಿವೆ
• ಟೋಲ್ ದರ ಏರಿಕೆ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಟೋಲ್ ಬರೆ ಬೀಳಲಿದೆ. ರಾಜ್ಯದ ಟೋಲ್ ಪ್ಲಾಜಾಗಳಲ್ಲಿ ಶೇ.3 ರಿಂದ 5ರಷ್ಟು ದರ ಹೆಚ್ಚಳವಾಗಲಿದ್ದು, ಕಾರುಗಳಿಗೆ 5 ರಿಂದ 10 ರೂ. ಹಾಗೂ ವಾಣಿಜ್ಯ ವಾಹನಗಳಿಗೆ 15 ರಿಂದ 40 ರೂ. ವರೆಗೆ ಹೊರೆ ಬೀಳಲಿದೆ. ವಾರ್ಷಿಕ ಪಾಸ್ ದರ 3,075 ರೂ.ಗೆ ಏರಿಕೆಯಾಗಲಿದೆ.
• ಬೆಂಗಳೂರಿಗರಿಗೆ ನೀರಿನ ಬಿಸಿ: ಬೆಂಗಳೂರು ಜಲಮಂಡಳಿ (BWSSB) ನೀರಿನ ದರವನ್ನು ಶೇ.3ರಷ್ಟು ಹೆಚ್ಚಳ ಮಾಡಿದೆ. ಇದರಿಂದ ಸಿಲಿಕಾನ್ ಸಿಟಿ ನಿವಾಸಿಗಳ ಮಾಸಿಕ ಬಿಲ್ ಏರಿಕೆಯಾಗಲಿದೆ.
• ವಿದ್ಯುತ್ ದರ ಪರಿಷ್ಕರಣೆ: ಕೆಇಆರ್ಸಿ (KERC) ಆದೇಶದಂತೆ ಕೈಗಾರಿಕಾ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ದರ ಏರಿಕೆಯಾಗಲಿದೆ. ಎಸ್ಕಾಂಗಳ ಆರ್ಥಿಕ ನಷ್ಟ ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.
• ರೈಲ್ವೆ ಟಿಕೆಟ್ ರದ್ದತಿ ನಿಯಮ: ಇನ್ಮುಂದೆ ರೈಲು ಹೊರಡುವ 8 ಗಂಟೆಗಳ ಮೊದಲು ಟಿಕೆಟ್ ರದ್ದುಗೊಳಿಸಿದರೆ ಯಾವುದೇ ಹಣ ಮರುಪಾವತಿ (Refund) ಸಿಗುವುದಿಲ್ಲ. ಪ್ರಯಾಣಿಕರು ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.
• ಹೊಸ ತೆರಿಗೆ ಮತ್ತು ಪ್ಯಾನ್ ನಿಯಮ: ಹೋಟೆಲ್ ಅಥವಾ ರೆಸ್ಟೋರೆಂಟ್ ಬಿಲ್ 1 ಲಕ್ಷ ರೂ. ದಾಟಿದರೆ ಪ್ಯಾನ್ (PAN) ನೀಡುವುದು ಕಡ್ಡಾಯ. ಆದರೆ, ಬ್ಯಾಂಕ್ಗಳಲ್ಲಿ ವರ್ಷಕ್ಕೆ 10 ಲಕ್ಷ ರೂ. ಒಳಗಿನ ಠೇವಣಿಗೆ ಪ್ಯಾನ್ ಅವಶ್ಯಕತೆ ಇರುವುದಿಲ್ಲ.
• ನಗದು ರಹಿತ ಟೋಲ್: ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದ್ದು, ಡಿಜಿಟಲ್ ಪಾವತಿ ಮಾತ್ರ ಲಭ್ಯವಿರಲಿದೆ.
• ಹೊಸ ಕಾರ್ಮಿಕ ಸಂಹಿತೆ: ಉದ್ಯೋಗಿಗಳ ವೇತನ ರಚನೆಯಲ್ಲಿ ಬದಲಾವಣೆಯಾಗಲಿದ್ದು, ಮೂಲ ವೇತನವು ಒಟ್ಟು ವೇತನದ (CTC) ಕನಿಷ್ಠ ಶೇ.50ರಷ್ಟು ಇರಬೇಕೆಂಬ ನಿಯಮ ಜಾರಿಗೆ ಬರಲಿದೆ. ಇದು ನಿಮ್ಮ ಕೈಗೆ ಬರುವ ಸಂಬಳ (Take-home salary) ಮತ್ತು ಪಿಎಫ್ ಮೇಲೆ ಪರಿಣಾಮ ಬೀರಲಿದೆ.
• ಹೆಚ್ಆರ್ಎ (HRA) ಸೌಲಭ್ಯ: ಬೆಂಗಳೂರು ಸೇರಿದಂತೆ ರಾಜ್ಯದ ಇನ್ನೂ 4 ನಗರಗಳು ಶೇ.50ರಷ್ಟು ಮನೆ ಬಾಡಿಗೆ ಭತ್ಯೆ (HRA) ಪಡೆಯುವ ನಗರಗಳ ಪಟ್ಟಿಗೆ ಸೇರ್ಪಡೆಯಾಗಿವೆ.

