ನವದೆಹಲಿ: ವಿದೇಶಿ ಪ್ರವಾಸ ಕೈಗೊಳ್ಳುವವರ ಮೇಲೆ ಸರ್ಕಾರವು ಹೊಸದಾಗಿ ಸೆಸ್ ಅಥವಾ ಹೆಚ್ಚುವರಿ ತೆರಿಗೆ ವಿಧಿಸಲು ಚಿಂತನೆ ನಡೆಸುತ್ತಿದೆ ಎಂಬ ಮಾಧ್ಯಮಗಳ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಲವಾಗಿ ತಳ್ಳಿಹಾಕಿದ್ದಾರೆ. ಈ ಸುದ್ದಿಯಲ್ಲಿ ಸಾಸಿವೆ ಕಾಳಿನಷ್ಟೂ ಸತ್ಯವಿಲ್ಲ ಎಂದು ಪ್ರಧಾನಿ ಖುದ್ದಾಗಿ ಎಕ್ಸ್ (ಟ್ವಿಟರ್) ಮೂಲಕ ತಿರುಗೇಟು ನೀಡಿದ ಬೆನ್ನಲ್ಲೇ, ಸದರಿ ಮಾಧ್ಯಮ ಸಂಸ್ಥೆಯು ತನ್ನ ವರದಿಯನ್ನು ಅಳಿಸಿಹಾಕಿ ವಿಷಾದ ವ್ಯಕ್ತಪಡಿಸಿದೆ.
ಟ್ವಿಟರ್ನಲ್ಲಿ ನೇರ ತಿರುಗೇಟು:
ಖಾಸಗಿ ಸುದ್ದಿ ಮಾಧ್ಯಮವೊಂದು ತನ್ನ ಅನಾಮಧೇಯ ಉನ್ನತ ಮೂಲಗಳನ್ನು ಉಲ್ಲೇಖಿಸಿ, ಜಾಗತಿಕವಾಗಿ ಹೆಚ್ಚುತ್ತಿರುವ ಕಚ್ಚಾತೈಲ ಹಾಗೂ ಆಮದು ವೆಚ್ಚದ ಆರ್ಥಿಕ ಹೊರೆಯನ್ನು ಸರಿದೂಗಿಸಲು ಕೇಂದ್ರ ಸರ್ಕಾರವು ವಿದೇಶಿ ಪ್ರವಾಸದ ಮೇಲೆ ಒಂದು ವರ್ಷದ ಅವಧಿಗೆ ವಿಶೇಷ ಸೆಸ್ ವಿಧಿಸುವ ಬಗ್ಗೆ ಚರ್ಚಿಸುತ್ತಿದೆ ಎಂದು ವರದಿ ಮಾಡಿತ್ತು.
ಈ ವರದಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ವರದಿಯಲ್ಲಿ ಸಾಸಿವೆ ಕಾಳಿನಷ್ಟೂ ಸತ್ಯವಿಲ್ಲ. ವಿದೇಶಿ ಪ್ರಯಾಣದ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರುವ ಪ್ರಶ್ನೆಯೇ ಇಲ್ಲ. ದೇಶದ ಜನರ ಸುಲಭ ಜೀವನ (Ease of Living) ಮತ್ತು ಸುಗಮ ವ್ಯವಹಾರಕ್ಕೆ (Ease of Doing Business) ಅನುವು ಮಾಡಿಕೊಡುವ ಬಗ್ಗೆ ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಖಡಾಖಂಡಿತವಾಗಿ ಬರೆದುಕೊಂಡಿದ್ದಾರೆ. ಪ್ರಧಾನಿಯವರ ಈ ಖಡಕ್ ನಡೆಯಿಂದಾಗಿ ಮಾಧ್ಯಮ ಸಂಸ್ಥೆಯು ತಕ್ಷಣವೇ ವರದಿ ಡಿಲೀಟ್ ಮಾಡಿದೆ.
ವರದಿಗೆ ಲಿಂಕ್ ಆಗಿದ್ದ ಪ್ರಧಾನಿಯವರ ಹಳೇ ಹೇಳಿಕೆ ಏನು?
ಇತ್ತೀಚೆಗಷ್ಟೇ ಹೈದರಾಬಾದ್ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಜಾಗತಿಕ ಯುದ್ಧದ ಸಂದರ್ಭದಲ್ಲಿ ಇಂಧನ ಉಳಿತಾಯ ಮತ್ತು ವಿದೇಶಿ ವಿನಿಮಯ ಮೀಸಲು ರಕ್ಷಿಸಲು ಸಾರ್ವಜನಿಕ ಸಾರಿಗೆ ಬಳಸಿ, ಅನಗತ್ಯ ವಿದೇಶಿ ಪ್ರವಾಸ ಹಾಗೂ ಚಿನ್ನದ ಖರೀದಿಯಿಂದ ದೂರವಿರಿ ಎಂದು ದೇಶದ ಜನತೆಗೆ ಕರೆ ನೀಡಿದ್ದರು. ಮಾಧ್ಯಮಗಳು ಇದನ್ನೇ ಲಿಂಕ್ ಮಾಡಿ ತೆರಿಗೆಯ ಸುಳ್ಳು ಸುದ್ದಿಯನ್ನು ಸೃಷ್ಟಿಸಿದ್ದವು ಎನ್ನಲಾಗಿದೆ.

