HomeKarnatakaಕೇವಲ ಪಕ್ಷದ ಪ್ರಚಾರಕನಾಗಿ ಪ್ರಧಾನಿ ಹುದ್ದೆಯ ಗೌರವ ಕಳೆದುಕೊಳ್ಳಬೇಡಿ: ಮೋದಿಗೆ ಸಿಎಂ ಸಿದ್ಧರಾಮಯ್ಯ ಮನವಿ

ಕೇವಲ ಪಕ್ಷದ ಪ್ರಚಾರಕನಾಗಿ ಪ್ರಧಾನಿ ಹುದ್ದೆಯ ಗೌರವ ಕಳೆದುಕೊಳ್ಳಬೇಡಿ: ಮೋದಿಗೆ ಸಿಎಂ ಸಿದ್ಧರಾಮಯ್ಯ ಮನವಿ

ಬೆಂಗಳೂರು: ಕೇವಲ ಪಕ್ಷದ ಪ್ರಚಾರಕನಾಗಿ ಪ್ರಧಾನಿ ಹುದ್ದೆಯ ಗೌರವ ಕಳೆದುಕೊಳ್ಳಬೇಡಿ ಎಂದು ಪ್ರಧಾನಿ  ಮೋದಿ ಅವರಿಗೆ ಸಿಎಂ ಸಿದ್ಧರಾಮಯ್ಯ ಮನವಿ ಮಾಡಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲಿನ ದು:ಸ್ವಪ್ನದಿಂದ ಪ್ರಧಾನಿ ಮೋದಿ ಅವರು ಇನ್ನೂ ಹೊರಬಂದಿಲ್ಲ ಎಂದು ಕಾಣಿಸುತ್ತದೆ. ಹೋದಲ್ಲಿ ಬಂದಲ್ಲಿ ಮೋದಿಯವರು ಕರ್ನಾಟಕವನ್ನು ಮತ್ತೆ ಮತ್ತೆ ತಮ್ಮ ಭಾಷಣದಲ್ಲಿ ಎಳೆದು ತರುತ್ತಿದ್ದಾರೆ. ಕರ್ನಾಟಕದ ಮದ್ಯ ಮಾರಾಟಗಾರರು ನೀಡಿರುವ ರಾಜಕೀಯ ಪ್ರೇರಿತ ದೂರು ಅಷ್ಟು ಬೇಗ ಮೋದಿಯವರನ್ನು ತಲುಪಿ ಬಿಟ್ಟಿದೆ. ಕೊರೊನಾ ಕಾಲದ ಭ್ರಷ್ಟಾಚಾರಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರನ್ನು ಪ್ರಾಸಿಕ್ಯೂಟ್ ಮಾಡುವಂತೆ ನಿವೃತ್ತ ನ್ಯಾಯಮೂರ್ತಿಯವರ ನೇತೃತ್ವದ ತನಿಖಾ ಸಮಿತಿ ಮಾಡಿರುವ ಶಿಫಾರಸಿನ ಸುದ್ದಿ ಅವರಿಗಿನ್ನೂ ತಲುಪಿಲ್ಲ ಎಂದು ಕಾಣುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೇ ಕೊರೊನಾ ಕಾಲದಲ್ಲಿ ಅಸಹಾಯಕ ಜನ ಸಾಯುತ್ತಿರುವಾಗ ಅಧಿಕಾರದಲ್ಲಿದ್ದ ನಿಮ್ಮ ಬಿಜೆಪಿ ಪಕ್ಷದ ಸರ್ಕಾರ ಸಾವಿನ ವ್ಯಾಪಾರ ಮಾಡುತ್ತಿದ್ದದ್ದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಮ್ಮ ಪಕ್ಷದ ಸರ್ಕಾರ 40% ಕಮಿಷನ್ ಸುಲಿಗೆ ನಡೆಸುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ನಿಮಗೆ ಖುದ್ದಾಗಿ ದೂರು ನೀಡಿದರೂ ಆ ಬಗ್ಗೆ ನೀವು ತುಟಿ ಬಿಚ್ಚಿರಲಿಲ್ಲ. ಸಚಿವರೊಬ್ಬರ ಕಿರುಕುಳದಿಂದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡರೂ ನೀವು ಪ್ರತಿಕ್ರಿಯಿಸಿರಲಿಲ್ಲ. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಬೆಳಗೆದ್ದು ಘೋಷಣೆ ಕೂಗುವ ನೀವು ತಮ್ಮ ಮನೆಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಪೋಕ್ಸೊ ಕಾಯ್ದೆಯಡಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುವುದಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಕಾರ್ಯಕ್ರಮಗಳನ್ನು ನೂರಕ್ಕೆ ನೂರರಷ್ಟು ನಾವು ಅನುಷ್ಠಾನಕ್ಕೆ ತಂದಿದ್ದರೂ ಮಹಾರಾಷ್ಟ್ರದಲ್ಲಿ ನಿಮ್ಮ ಪಕ್ಷ ಸುಳ್ಳು ಹೇಳುವ ಜಾಹೀರಾತು ಪ್ರಕಟಿಸುತ್ತದೆ. ನೀವು ಹೇಳುತ್ತಾ ಬಂದಿರುವ ಸುಳ್ಳುಗಳಿಂದಲೇ ಅವರು ಪ್ರೇರಣೆ ಪಡೆದುಕೊಂಡಿರುವುದು ಸ್ಪಷ್ಟ. ನಾಯಕರೇ ಸುಳ್ಳುಕೋರರಾದರೆ ಅನುಯಾಯಿಗಳು ಸತ್ಯವಂತರಾಗಲು ಹೇಗೆ ಸಾಧ್ಯ? ಆಗಿರುವ ತಪ್ಪನಾದರೂ ಒಪ್ಪಿಕೊಂಡು ಕ್ಷಮೆ ಕೇಳಿ ಎಂದು ನಾನು ನಿಮ್ಮನ್ನು ಕೋರಿದ್ದೆ. ಆದರೆ ನೀವು ಇಲ್ಲಿಯ ವರೆಗೆ ಪ್ರತಿಕ್ರಿಯಿಸಿಲ್ಲ, ಯಾಕೆ ಎಂದು ಕೇಳಿದ್ದಾರೆ.

ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಗೊಂಡಿರುವ ಗ್ಯಾರಂಟಿ ಯೋಜನೆಗಳು ನಿಮ್ಮ ಕಣ್ಣು ಕುಕ್ಕುತ್ತಿರುವುದನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ಇದಕ್ಕಾಗಿ ಕರ್ನಾಟಕದ ಕಾಲೆಳೆಯುತ್ತಲೇ ಇದ್ದೀರಿ. ಕರ್ನಾಟಕಕ್ಕೆ ಬರುವ ಹುಮ್ಮಸ್ಸಿನಲ್ಲಿರುವ ಉದ್ಯಮಿಗಳನ್ನು ನಿಮ್ಮ ಸ್ಥಾನದ ಬಲದಿಂದ ತಡೆದು ಗುಜರಾತ್ ಗೆ ಕರೆದೊಯ್ದು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದ್ದೀರಿ. ನಮ್ಮ ಆದಾಯವನ್ನು ಕುಂಠಿತಗೊಳಿಸಬೇಕೆಂಬ ದುರುದ್ದೇಶದಿಂದ ನಮ್ಮ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿದ್ದೀರಿ. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರದೆ ಇದ್ದರೆ ಕನ್ನಡಿಗರು ಪ್ರಧಾನಿ ಕೋಪಕ್ಕೆ ತುತ್ತಾಗಲಿದ್ದಾರೆ ಎಂದು ಕಳೆದ ಚುನಾವಣೆಯ ಕಾಲದಲ್ಲಿ ನಿಮ್ಮ ಪಕ್ಷದ ಅಧ್ಯಕ್ಷರಾದ ಜೆ.ಪಿ.ನಡ್ಡಾ ನೀಡಿದ್ದ ಎಚ್ಚರಿಕೆ ಇಂದು ನಿಜವಾಗುತ್ತಿದೆ. ನೀವು ನಿರಂತರವಾಗಿ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ ಮತ್ತು ಅಪಮಾನವನ್ನು ಕನ್ನಡಿಗರು ಬಹಳ ದಿನ ಸಹಿಸಲಾರರು. ನರೇಂದ್ರ ಮೋದಿ ಅವರೇ, ಮೊದಲು ನೀವು ನಮ್ಮೆಲ್ಲರಿಗೆ ಸೇರಿರುವ ದೇಶದ ಪ್ರಧಾನಿಯಾಗಿ, ಕೇವಲ ಪಕ್ಷದ ಪ್ರಚಾರಕನಾಗಿ ಪ್ರಧಾನಿ ಹುದ್ದೆಯ ಗೌರವ ಕಳೆದುಕೊಳ್ಳಬೇಡಿ. ಇದು ನನ್ನ ಸವಿನಯ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular