ನನ್ನ ತಂದೆಗೆ ಈಗಾಗಲೇ ಆರು ಬಾರಿ ಮದುವೆಯಾಗಿದೆ, ಈಗ ಏಳನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ. ದಯವಿಟ್ಟು ಇದನ್ನು ನಿಲ್ಲಿಸಿ ನಮ್ಮನ್ನು ಉಳಿಸಿ” – ಹೀಗೆಂದು 12ನೇ ತರಗತಿಯ ಅಪ್ರಾಪ್ತ ಬಾಲಕನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿ ಕಣ್ಣೀರು ಹಾಕಿರುವ ಘಟನೆ ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯಲ್ಲಿ ನಡೆದಿದೆ. 55 ವರ್ಷದ ತಂದೆಯ ಮದುವೆ ಹುಚ್ಚಿನಿಂದಾಗಿ ಕುಟುಂಬದ ಆಸ್ತಿ ಪಾಸ್ತಿ ಹರಾಜಾಗುತ್ತಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಮಗ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾನೆ.
ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯಲ್ಲಿ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಮಕ್ಕಳು ಪೋಷಕರ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಾರೆ, ಆದರೆ ಇಲ್ಲಿ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ತಂದೆ ಮಾಡಿಕೊಳ್ಳುತ್ತಿರುವ 7ನೇ ಮದುವೆಯನ್ನು ನಿಲ್ಲಿಸುವಂತೆ ಪೊಲೀಸರ ಮೊರೆ ಹೋಗಿದ್ದಾನೆ.
ಘಟನೆಯ ಹಿನ್ನೆಲೆ
ಬಾಲಕನ 55 ವರ್ಷದ ತಂದೆ ಈಗಾಗಲೇ ಆರು ಬಾರಿ ವಿವಾಹವಾಗಿದ್ದಾರೆ. ಈಗ 7ನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದು, ಇದರಿಂದ ಕುಟುಂಬದ ಜೀವನ ಸಂಪೂರ್ಣ ಹದಗೆಟ್ಟಿದೆ ಎಂದು ಬಾಲಕ ಅಳಲು ತೋಡಿಕೊಂಡಿದ್ದಾನೆ.
ಆರನೇ ಪತ್ನಿಯ ಕಿರಿಕ್: ಈ ವ್ಯಕ್ತಿ 2024ರಲ್ಲಿ ಆರನೇ ಮದುವೆಯಾಗಿದ್ದರು. ಆದರೆ ಆಕೆ ಆಸ್ತಿ ಮತ್ತು ಒಡವೆಗಾಗಿ ಜಗಳವಾಡಿ ಕೆಲವೇ ದಿನಗಳಲ್ಲಿ ಮನೆ ಬಿಟ್ಟು ಹೋಗಿದ್ದಾಳೆ. ಈ ಕಹಿ ಅನುಭವದ ನಂತರವೂ ತಂದೆ ಈಗ ಮತ್ತೆ ಮದುವೆಗೆ ಮುಂದಾಗಿದ್ದಾರೆ.
ಮೂರನೇ ಪತ್ನಿಯ ಮಗ: ದೂರು ನೀಡಿದ ಬಾಲಕ ಈ ವ್ಯಕ್ತಿಯ ಮೂರನೇ ಪತ್ನಿಯ ಮಗನಾಗಿದ್ದಾನೆ. ತಂದೆಯ ಸರಣಿ ಮದುವೆಗಳಿಂದ ಮನೆಯ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ ಎಂದು ಅವನು ವಿವರಿಸಿದ್ದಾನೆ.
ಆರ್ಥಿಕ ಸಂಕಷ್ಟ ಮತ್ತು ಆಸ್ತಿ ಮಾರಾಟದ ಆರೋಪ
7ನೇ ಮದುವೆಯ ವೆಚ್ಚಕ್ಕಾಗಿ ತಂದೆಯು ಹಿರಿಯರಿಂದ ಬಂದ ಆಸ್ತಿಯನ್ನು ಮಾರಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಈಗಾಗಲೇ ಸುಮಾರು ₹50,000 ಅಡ್ವಾನ್ಸ್ ಪಡೆದಿದ್ದಾರೆ ಎಂದು ಬಾಲಕ ಆರೋಪಿಸಿದ್ದಾನೆ.ಕುಟುಂಬದ ಅರ್ಧದಷ್ಟು ಭೂಮಿಯನ್ನು ಈಗಾಗಲೇ ಅಡವಿಟ್ಟು ಸಾಲ ಮಾಡಲಾಗಿದ್ದು, ಆ ಸಾಲದ ಹೊರೆಯನ್ನು ತಾನೇ ಹೊರಬೇಕಾಗಿ ಬಂದಿದೆ ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಇನ್ನೊಂದು ಮದುವೆಯಾದರೆ ಕುಟುಂಬ ಬೀದಿಗೆ ಬರಲಿದೆ ಎಂಬುದು ಅವನ ಆತಂಕ.
ಈ ವಿಷಯವು ಪೊಲೀಸ್ ಅಧಿಕಾರಿ ಚಿರಾಗ್ ಜೈನ್ (Chirag Jain) ಅವರ ಗಮನಕ್ಕೆ ಬಂದಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ವ್ಯಕ್ತಿಯ ಹಿಂದಿನ ವಿವಾಹ ದಾಖಲೆಗಳು, ಭೂಮಿ ಮಾರಾಟದ ಒಪ್ಪಂದ ಮತ್ತು ಸಾಲದ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ತನಿಖೆಯ ನಂತರ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ತನ್ನ ಕುಟುಂಬ ಮತ್ತು ಭವಿಷ್ಯವನ್ನು ಉಳಿಸಿಕೊಳ್ಳಲು ಅಪ್ರಾಪ್ತ ಮಗನೇ ಪೊಲೀಸರ ಮೆಟ್ಟಿಲೇರಿರುವುದು ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

