ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸುತ್ತಿರುವ ಎಲ್ಲಾ ಗ್ರಾಹಕರಿಗೆ ಕೇಂದ್ರ ಸರ್ಕಾರವು ಬಿಗ್ ಅಲರ್ಟ್ ಜಾರಿ ಮಾಡಿದೆ. ಗ್ಯಾಸ್ ಗ್ರಾಹಕರು ಆಧಾರ್ ದೃಢೀಕರಣದ ಇ-ಕೆವೈಸಿ (e-KYC) ಮಾಡಿಸುವುದನ್ನು ಕೇಂದ್ರ ಕಡ್ಡಾಯಗೊಳಿಸಿದೆ. ಅಕ್ರಮ ಗ್ಯಾಸ್ ಸಂಪರ್ಕಗಳು ಮತ್ತು ಸಿಲಿಂಡರ್‌ಗಳ ಬಳಕೆಯನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಈ ಕುರಿತು ಎಕ್ಸ್ (ಟ್ವಿಟ್ಟರ್) ನಲ್ಲಿ ವಿವರಗಳನ್ನು ಹಂಚಿಕೊಳ್ಳಲಾಗಿದೆ.
ಪ್ರತಿ ಹಣಕಾಸು ವರ್ಷದಲ್ಲಿ ಒಮ್ಮೆ ಗ್ಯಾಸ್ ಗ್ರಾಹಕರು ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. 2025-26ರ ಹಣಕಾಸು ವರ್ಷವು ಇನ್ನೇನು ಕೆಲವು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ಮಾರ್ಚ್ 31ರೊಳಗೆ ಎಲ್ಲಾ ಗ್ಯಾಸ್ ಗ್ರಾಹಕರು ಆಧಾರ್ ಇ-ಕೆವೈಸಿ ಮಾಡಿಸಿಕೊಳ್ಳಲೇಬೇಕು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಿ
“LPG ಬಯೋಮೆಟ್ರಿಕ್ ಆಧಾರ್ ದೃಢೀಕರಣ ಅಥವಾ ಇ-ಕೆವೈಸಿ ಪೂರ್ಣಗೊಳಿಸಲು ಕೊನೆಯ ದಿನಾಂಕ ಹತ್ತಿರ ಬರುತ್ತಿದೆ. ಗ್ರಾಹಕರು ಈ ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸಬೇಕು. ಈಗ ನಿಮ್ಮ ಮನೆಯಿಂದಲೇ ಉಚಿತವಾಗಿ ಇ-ಕೆವೈಸಿ ಮಾಡಲು ಸುಲಭವಾದ ಮಾರ್ಗ ಲಭ್ಯವಿದೆ. Aadhaar FaceRD ಆ್ಯಪ್ ಮತ್ತು ನಿಮ್ಮ ಗ್ಯಾಸ್ ಕಂಪನಿಯ ಮೊಬೈಲ್ ಆ್ಯಪ್ ಬಳಸಿ ನೀವು ಇದನ್ನು ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ https://www.pmuy.gov.in/e-kyc.html ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ನಿಮ್ಮ ಗ್ಯಾಸ್ ವಿತರಕರನ್ನು (Distributor) ಸಂಪರ್ಕಿಸಿ ಅಥವಾ ಟೋಲ್-ಫ್ರೀ ಸಂಖ್ಯೆ 1800 2333 555 ಕ್ಕೆ ಕರೆ ಮಾಡಿ” ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಇ-ಕೆವೈಸಿ ಮಾಡುವುದು ಹೇಗೆ?
- ಮೇಲೆ ನೀಡಲಾದ ವೆಬ್‌ಸೈಟ್ ಲಿಂಕ್ ಓಪನ್ ಮಾಡಿ.
- ನಿಮ್ಮ ಗ್ಯಾಸ್ ಕಂಪನಿಯ (Indane, HP ಅಥವಾ Bharat Gas) ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
- ಗೂಗಲ್ ಪ್ಲೇ ಸ್ಟೋರ್‌ನಿಂದ Aadhaar FaceRD ಆ್ಯಪ್ ಡೌನ್‌ಲೋಡ್ ಮಾಡಿ.
- ಗ್ಯಾಸ್ ಕಂಪನಿ ಆ್ಯಪ್‌ನಲ್ಲಿ ನೀಡಲಾದ ಸೂಚನೆಗಳಂತೆ ಆಧಾರ್ ಫೇಸ್ ಆರ್‌ಡಿ ಆ್ಯಪ್ ಮೂಲಕ ನಿಮ್ಮ ಮುಖವನ್ನು ಸ್ಕ್ಯಾನ್ ಮಾಡಿ ಆಧಾರ್ ದೃಢೀಕರಣ ಪೂರ್ಣಗೊಳಿಸಿ.
ಗ್ಯಾಸ್ ಸಬ್ಸಿಡಿ ಹಣ ಕಟ್!
- ಉಜ್ವಲ ಯೋಜನೆ ಅಡಿಯಲ್ಲಿ ಸಿಲಿಂಡರ್ ಮೇಲೆ 300 ರೂ. ಸಬ್ಸಿಡಿ ಪಡೆಯುವ ಫಲಾನುಭವಿಗಳು ಪ್ರತಿ ವರ್ಷ ಇ-ಕೆವೈಸಿ ಮಾಡಿಸಲೇಬೇಕು. ಇಲ್ಲದಿದ್ದರೆ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಜಮೆಯಾಗುವುದಿಲ್ಲ.
- ಇ-ಕೆವೈಸಿ ಮಾಡದಿದ್ದರೂ 7ನೇ ರೀಫಿಲ್ (ಸಿಲಿಂಡರ್ ಬುಕ್ಕಿಂಗ್) ವರೆಗೆ ಸಬ್ಸಿಡಿ ಮುಂದುವರಿಯುತ್ತದೆ. ಆ ನಂತರವೂ ಕೆವೈಸಿ ಮಾಡದಿದ್ದರೆ ಹಣ ಸ್ಥಗಿತಗೊಳಿಸಲಾಗುತ್ತದೆ.
- ಒಮ್ಮೆ ಇ-ಕೆವೈಸಿ ಪೂರ್ಣಗೊಳಿಸಿದರೆ, ಸ್ಥಗಿತಗೊಂಡ ಹಣ ಮತ್ತೆ ಜಮೆಯಾಗುತ್ತದೆ.
- ಈಗಾಗಲೇ ಈ ಹಣಕಾಸು ವರ್ಷದಲ್ಲಿ ಇ-ಕೆವೈಸಿ ಮಾಡಿದ್ದಲ್ಲಿ, ಮತ್ತೆ ಮಾಡುವ ಅಗತ್ಯವಿಲ್ಲ.
- ಉಜ್ವಲ ಫಲಾನುಭವಿಗಳಷ್ಟೇ ಅಲ್ಲದೆ, ಉಳಿದ ಎಲ್ಲಾ ಗ್ಯಾಸ್ ಗ್ರಾಹಕರು ಸಹ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

