ಬಹಳಷ್ಟು ಮಂದಿ ತಮ್ಮ ಆರ್ಥಿಕ ಅಗತ್ಯಗಳಿಗಾಗಿ ಪಿಎಫ್ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳುತ್ತಾರೆ. ಆದರೆ ಪಿಎಫ್ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಲು ಕಾರಣವನ್ನು ನೀಡಬೇಕಾಗುತ್ತದೆ. ಉದ್ಯೋಗದಲ್ಲಿರುವಾಗಲೇ ಪಿಎಫ್ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಲು ಕೆಲವು ಆಯ್ಕೆಗಳು ಲಭ್ಯವಿವೆ. ಶಿಕ್ಷಣ, ಮದುವೆ, ಮನೆ ನಿರ್ಮಾಣ ಸೇರಿದಂತೆ ವಿವಿಧ ವರ್ಗಗಳ ಅಡಿಯಲ್ಲಿ ಪಿಎಫ್ ಹಣವನ್ನು ಮುಂಗಡವಾಗಿ ಹಿಂಪಡೆಯಬಹುದು.
ಆದರೆ ಮನೆ ನಿರ್ಮಾಣ ಅಥವಾ ಮನೆ ಖರೀದಿಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಹೀಗಾಗಿ ಇದಕ್ಕಾಗಿ ಉಳಿತಾಯ ಮಾಡಿರುವ ಪಿಎಫ್ ಹಣವನ್ನು ಕೆಲವರು ವಿತ್‌ಡ್ರಾ ಮಾಡಿಕೊಳ್ಳುತ್ತಾರೆ. ಹಾಗಾದರೆ ಮನೆ ಖರೀದಿ ಅಥವಾ ನಿರ್ಮಾಣಕ್ಕಾಗಿ ಪಿಎಫ್ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳುವುದು ಒಳ್ಳೆಯದೇ? ಅಥವಾ ಕೆಟ್ಟದ್ದೇ? ಎಂಬುದನ್ನು ತಿಳಿದುಕೊಳ್ಳೋಣ.
ಪಿಎಫ್ ಹಣವನ್ನು ವಿತ್‌ಡ್ರಾ ಮಾಡುತ್ತಿದ್ದೀರಾ..?
ಹೋಮ್ ಲೋನ್ ಪಡೆಯಲು ಸಾಕಷ್ಟು ಪ್ರಕ್ರಿಯೆಗಳಿವೆ. ಆಸ್ತಿಗಳನ್ನು ಅಡಮಾನ ಇಡಬೇಕಾಗುತ್ತದೆ. ಜೊತೆಗೆ ಬಡ್ಡಿದರವೂ ಹೆಚ್ಚಿರುತ್ತದೆ. ಹೀಗಾಗಿ ಅನೇಕರು ಪಿಎಫ್ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಲು ಮುಂದಾಗುತ್ತಾರೆ.
ಮನೆ ಖರೀದಿ ಅಥವಾ ನಿರ್ಮಾಣ ಹಾಗೂ ಹೋಮ್ ಲೋನ್‌ನ ಇಎಂಐ ಪಾವತಿಗಾಗಿ ಪಿಎಫ್ ಹಣವನ್ನು ಭಾಗಶಃ ವಿತ್‌ಡ್ರಾ ಮಾಡಿಕೊಳ್ಳಲು ಅವಕಾಶವಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ, 1952ರ (EPF Scheme) ಸೆಕ್ಷನ್ 68-B ಅಡಿಯಲ್ಲಿ ಕೆಲವು ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟು ಮನೆ ನಿರ್ಮಾಣ, ಮನೆ ಖರೀದಿ ಅಥವಾ ಹೋಮ್ ಲೋನ್ ಪಾವತಿಗಾಗಿ ಪಿಎಫ್ ಹಣವನ್ನು ಭಾಗಶಃ ಹಿಂಪಡೆಯಬಹುದು.
ಈ ರೀತಿಯಲ್ಲಿ ನಿಮ್ಮ ಪಿಎಫ್ ಖಾತೆಯಲ್ಲಿರುವ ಮೊತ್ತದ ಶೇ.90ರಷ್ಟು ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು. ಆದರೆ ಮನೆ ನಿಮ್ಮ ಹೆಸರಿನಲ್ಲಿ, ನಿಮ್ಮ ಜೀವನ ಸಂಗಾತಿಯ ಹೆಸರಿನಲ್ಲಿ ಅಥವಾ ಇಬ್ಬರ ಹೆಸರಿನಲ್ಲಿದ್ದರೆ ಮಾತ್ರ ಹಣವನ್ನು ಹಿಂಪಡೆಯಲು ಸಾಧ್ಯ. ಅಲ್ಲದೆ, ಅಗತ್ಯಕ್ಕೆ ಅನುಗುಣವಾಗಿ ಕಂತುಗಳ ರೂಪದಲ್ಲಿಯೂ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು.
ಒಳ್ಳೆಯದೇ..? ಕೆಟ್ಟದ್ದೇ?
ಮನೆ ನಿರ್ಮಾಣವನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಬೇಕಾಗುತ್ತದೆ. ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವುದರಿಂದ ಹೋಮ್ ಲೋನ್ ಮೊತ್ತ ಹಾಗೂ ಇಎಂಐ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು.
ಹೋಮ್ ಲೋನ್ ಪ್ರಕ್ರಿಯೆ ಪೂರ್ಣಗೊಳ್ಳಲು ಹಲವು ದಿನಗಳು ಬೇಕಾಗಬಹುದು. ಆದರೆ ಪಿಎಫ್ ಹಣ ಸಾಮಾನ್ಯವಾಗಿ ಕಡಿಮೆ ಸಮಯದಲ್ಲೇ ಖಾತೆಗೆ ಜಮೆಯಾಗುವುದರಿಂದ ಮನೆ ಖರೀದಿ ಅಥವಾ ನಿರ್ಮಾಣಕ್ಕೆ ತ್ವರಿತವಾಗಿ ಬಳಸಿಕೊಳ್ಳಬಹುದು.
ಹೋಮ್ ಲೋನ್ ಪಡೆಯುವಾಗ ನಿಮ್ಮ ಆಸ್ತಿಯನ್ನು ಅಡಮಾನ ಇಡಬೇಕಾಗುತ್ತದೆ. ಪಿಎಫ್ ಹಣವನ್ನು ಬಳಸುವುದರಿಂದ ಆಸ್ತಿಯನ್ನು ಅಡಮಾನ ಇಡುವ ಅಗತ್ಯ ಕಡಿಮೆಯಾಗಬಹುದು. ಮತ್ತೊಂದೆಡೆ, ಆಸ್ತಿಯ ಮೌಲ್ಯ ಕಾಲಕ್ರಮೇಣ ಹೆಚ್ಚಾಗುವ ಸಾಧ್ಯತೆಯೂ ಇದೆ.
ಪಿಎಫ್ ಹಣದಿಂದ ಪಡೆಯುವ ಬಡ್ಡಿ/ರಿಟರ್ನ್‌ಗೆ ಹೋಲಿಸಿದರೆ ಆಸ್ತಿ ಮೌಲ್ಯದಲ್ಲಿ ಹೆಚ್ಚಿನ ಏರಿಕೆ ನಿರೀಕ್ಷೆಯಿದ್ದರೆ, ಮನೆ ಖರೀದಿಗಾಗಿ ಪಿಎಫ್ ಹಣವನ್ನು ಬಳಸುವುದು ಕೆಲವು ಸಂದರ್ಭಗಳಲ್ಲಿ ಸೂಕ್ತವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಪಿಎಫ್ ಹಣ ವಿತ್‌ಡ್ರಾ ಮಾಡುವುದರಿಂದ ಆಗುವ ನಷ್ಟಗಳೇನು?
ಪಿಎಫ್ ಹಣವನ್ನು ಮುಂಚಿತವಾಗಿ ವಿತ್‌ಡ್ರಾ ಮಾಡುವುದರಿಂದ ನಿಮ್ಮ ನಿವೃತ್ತಿ ನಿಧಿ ಕಡಿಮೆಯಾಗುತ್ತದೆ. ಪಿಎಫ್ ಹಣವು ದೀರ್ಘಾವಧಿಯಲ್ಲಿ ಬಡ್ಡಿಯೊಂದಿಗೆ ಬೆಳೆಯುವುದರಿಂದ, ಈಗ ದೊಡ್ಡ ಮೊತ್ತವನ್ನು ಹಿಂಪಡೆದರೆ ಭವಿಷ್ಯದಲ್ಲಿ ಸಿಗುವ ಒಟ್ಟು ಮೊತ್ತದ ಮೇಲೂ ಪರಿಣಾಮ ಬೀರುತ್ತದೆ.
ಅಲ್ಲದೆ, ಭವಿಷ್ಯದಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ ಪಿಎಫ್ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದಿರುವ ಸಾಧ್ಯತೆಯಿದೆ. ಹೀಗಾಗಿ ಮನೆಗಾಗಿ ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವ ಮೊದಲು, ನಿವೃತ್ತಿ ಉಳಿತಾಯ, ತುರ್ತು ನಿಧಿ ಮತ್ತು ಹೋಮ್ ಲೋನ್‌ನ ಒಟ್ಟು ವೆಚ್ಚಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.

