ಪಶ್ಚಿಮ ಅಲಾಸ್ಕಾದ ಹಿಮಭರಿತ ಪ್ರದೇಶದಲ್ಲಿ 8 ಜನರಿದ್ದ ಪ್ರಯಾಣಿಕರ ವಿಮಾನವೊಂದು ಪತನಗೊಂಡಿದೆ. ವಿಮಾನದಲ್ಲಿ ಇಬ್ಬರು ಪೈಲಟ್ಗಳು ಹಾಗೂ ಆರು ಮಂದಿ ಪ್ರಯಾಣಿಕರಿದ್ದರು. ದುರಂತದಲ್ಲಿ ಎಲ್ಲರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯ (NTSB) ಅಲಾಸ್ಕಾ ಮುಖ್ಯಸ್ಥ ಕ್ಲಿಂಟ್ ಜಾನ್ಸನ್ ಅವರ ಪ್ರಕಾರ, ಆಂಕಾರೇಜ್ ನಗರದಿಂದ ಹೊರಟಿದ್ದ ಈ ವಿಮಾನವು ಕೇಪ್ ನ್ಯೂವೆನ್ಹ್ಯಾಮ್ ಲಾಂಗ್ ರೇಂಜ್ ರಾಡಾರ್ ಸೈಟ್ ಸಮೀಪಿಸುತ್ತಿದ್ದಾಗ ಅಪಘಾತಕ್ಕೀಡಾಗಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಅಲಾಸ್ಕಾ ರಕ್ಷಣಾ ಸಮನ್ವಯ ಕೇಂದ್ರವು (RCC) ಯುಎಸ್ ಕೋಸ್ಟ್ ಗಾರ್ಡ್ ನೆರವಿನೊಂದಿಗೆ ತುರ್ತು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ವಿಮಾನದಲ್ಲಿದ್ದವರ ಬಗ್ಗೆ ತಕ್ಷಣಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಅಲಾಸ್ಕಾದ ಕರಾವಳಿ ಮತ್ತು ರಾಡಾರ್ ಸೈಟ್ಗಳ ಪ್ರದೇಶವು ಭಾರಿ ಹಿಮಪಾತ, ಮಂಜು ಮತ್ತು ಕ್ಷಿಪ್ರ ಹವಾಮಾನ ಬದಲಾವಣೆಗಳಿಗೆ ಕುಖ್ಯಾತವಾಗಿದ್ದು, ಇದು ಸಣ್ಣ ಚಾರ್ಟರ್ ವಿಮಾನಗಳ ಹಾರಾಟಕ್ಕೆ ನಿರಂತರ ಸವಾಲಾಗಿದೆ.
ಇನ್ನು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಮತ್ತು NTSB ಅಪಘಾತಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಪ್ರತಿಕೂಲ ವಾತಾವರಣ ಕಾರಣವೇ ಎಂಬುದರ ಬಗ್ಗೆ ತನಿಖೆ ಆರಂಭಿಸಿವೆ.

