ನವದೆಹಲಿ: ಜುಲೈ 20ರಂದು ನಡೆದ ‘ಸಂಸತ್ ಚಲೋ’ ಪ್ರತಿಭಟನೆ ವೇಳೆ ಪೆಲೆಟ್ ಗನ್ನಿಂದ ಗಾಯಗೊಂಡಿದ್ದಾರೆ ಎನ್ನಲಾದ ಯುವಕನೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿದರು. ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವಂತೆ ಅವರು ಪೊಲೀಸರನ್ನು ಆಗ್ರಹಿಸಿದರು. ಪ್ರತಿಭಟನಾಕಾರರ ಮೇಲೆ RAF ಸಿಬ್ಬಂದಿ ಪೆಲೆಟ್ ಗನ್ ಬಳಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ದೆಹಲಿ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ.
ಹೌದು. ಶುಕ್ರವಾರ ಹೈಡ್ರಾಮಾವೇ ನಡೆಯಿತು. ಜುಲೈ 20ರಂದು ನಡೆದ Gen Z ಪ್ರತಿಭಟನೆಯ ವೇಳೆ ಪೆಲೆಟ್ ಗನ್ನಿಂದ ಗಾಯಗೊಂಡಿದ್ದಾರೆ ಎನ್ನಲಾದ ಯುವಕನೊಂದಿಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿದರು. ಗಾಯಗೊಂಡಿರುವುದಾಗಿ ಹೇಳಲಾದ ಸಾಹಿಲ್ ಲೋಚಬ್ ಹಾಗೂ ಇತರರೊಂದಿಗೆ ರಾಹುಲ್ ಗಾಂಧಿ ಪೊಲೀಸ್ ಠಾಣೆಗೆ ಪ್ರವೇಶಿಸಿದ ದೃಶ್ಯಗಳು ಕಂಡುಬಂದಿವೆ. ಈ ವೇಳೆ ಅಧಿಕಾರಿಗಳು ಅಚ್ಚರಿಗೊಂಡರು. ಘಟನೆಗೆ ಸಂಬಂಧಿಸಿದಂತೆ FIR ದಾಖಲಿಸುವಂತೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದರು.
ಜುಲೈ 20ರಂದು ವಿದ್ಯಾರ್ಥಿಗಳು ನಡೆಸಿದ ‘ಸಂಸತ್ ಚಲೋ’ ಮೆರವಣಿಗೆ ವೇಳೆ RAF ಸಿಬ್ಬಂದಿ ಪೆಲೆಟ್ ಗನ್ ಬಳಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪ್ರತಿಭಟನೆ ನಡೆದ ಬಳಿಕದ ದಿನಗಳಲ್ಲಿ ಹಲವರು ಗಾಯಗೊಂಡಿರುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಆರೋಪ ಮಾಡಿದೆ.
ಆದರೆ ದೆಹಲಿ ಪೊಲೀಸರು ಪೆಲೆಟ್ ಗನ್ ಬಳಸಿರುವುದನ್ನು ಹಲವು ಬಾರಿ ನಿರಾಕರಿಸಿದ್ದಾರೆ. CRPF ಮಾತ್ರ ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಗಾಯಗೊಂಡ ಪ್ರತಿಭಟನಾಕಾರರ ಹೇಳಿಕೆಗಳು, ವೈದ್ಯಕೀಯ ವರದಿಗಳು ಜುಲೈ 20ರಂದು ಪೆಲೆಟ್ ಗನ್ ಬಳಸಲಾಗಿಲ್ಲ ಎಂಬ ಪೊಲೀಸರ ಹೇಳಿಕೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

