ಪಿಎಫ್ ಖಾತೆ ಹೊಂದಿರುವವರು ಕೆಲವು ಪ್ರಮುಖ ಕೆಲಸಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. UAN ಸಂಖ್ಯೆಯನ್ನು ಆಕ್ಟಿವೇಟ್ ಮಾಡಿಕೊಂಡ ನಂತರ ಮಾಡಬೇಕಾದ ಹಲವು ಕೆಲಸಗಳಿವೆ. ಮೊದಲಿಗೆ KYC ವಿವರಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು.
ಆಧಾರ್, PAN ಮತ್ತು ಬ್ಯಾಂಕ್ ಖಾತೆಯನ್ನು ಪಿಎಫ್ ಪೋರ್ಟಲ್‌ಗೆ ಲಿಂಕ್ ಮಾಡಬೇಕು. ಹಾಗೆಯೇ ನಿಮ್ಮ ಹೆಸರು, ಜನ್ಮ ದಿನಾಂಕ, ತಂದೆಯ ಹೆಸರು ಸೇರಿದಂತೆ ಎಲ್ಲಾ ವಿವರಗಳನ್ನು ಪರಿಶೀಲಿಸಬೇಕು. ಯಾವುದೇ ತಪ್ಪುಗಳಿದ್ದರೆ ಅವುಗಳನ್ನು ತಕ್ಷಣ ಸರಿಪಡಿಸಿಕೊಳ್ಳುವ ಅವಕಾಶವಿದೆ. ನಿಮ್ಮ KYC ದಾಖಲೆಗಳಲ್ಲಿರುವ ವಿವರಗಳು ಮತ್ತು ಪಿಎಫ್ ಪೋರ್ಟಲ್‌ನಲ್ಲಿರುವ ವಿವರಗಳು ಒಂದೇ ಆಗಿರಬೇಕು. ಇಲ್ಲದಿದ್ದರೆ ಪಿಎಫ್ ಕ್ಲೇಮ್ ಮಾಡುವ ಸಂದರ್ಭದಲ್ಲಿ ಹಲವು ಸಮಸ್ಯೆಗಳು ಎದುರಾಗಬಹುದು.
ಇ-ನಾಮಿನೇಷನ್ ಕಡ್ಡಾಯ
ಇ-ನಾಮಿನೇಷನ್ ಕೂಡ ಪ್ರಮುಖವಾಗಿ ಮಾಡಬೇಕಾದ ಕೆಲಸವಾಗಿದೆ. ನಿಮ್ಮ ಪೋಷಕರು, ಪತಿ ಅಥವಾ ಪತ್ನಿಯ ವಿವರಗಳನ್ನು ಸಲ್ಲಿಸಬೇಕು. ಅವರ ಆಧಾರ್ ಕಾರ್ಡ್ ಸಂಖ್ಯೆಯ ಜೊತೆಗೆ ಫೋಟೋವನ್ನು ಸಹ ಅಪ್‌ಲೋಡ್ ಮಾಡಬೇಕಾಗುತ್ತದೆ.
ಈ ಮೂಲಕ ನಿಮ್ಮ ನಾಮಿನಿಯ ವಿವರಗಳನ್ನು ದಾಖಲಿಸಬಹುದು. ನೀವು ಉದ್ಯೋಗದಲ್ಲಿರುವಾಗ ಮೃತಪಟ್ಟರೆ, ನಿಮ್ಮ ಪಿಎಫ್ ಖಾತೆಯಲ್ಲಿರುವ ಹಣವನ್ನು ನಾಮಿನಿ ಕ್ಲೇಮ್ ಮಾಡಿಕೊಳ್ಳಬಹುದು.
ಅಲ್ಲದೆ, ನೀವು ಸೇವೆಯಲ್ಲಿರುವಾಗ ಮೃತಪಟ್ಟರೆ, EPFO ವತಿಯಿಂದ ಕುಟುಂಬದ ಸದಸ್ಯರು ಅಥವಾ ನಾಮಿನಿಗೆ ₹7 ಲಕ್ಷದವರೆಗೆ EDLI ಜೀವ ವಿಮಾ ಪ್ರಯೋಜನ ದೊರೆಯಬಹುದು. ಇದಕ್ಕಾಗಿ ನಾಮಿನಿ ವಿವರಗಳನ್ನು ಸರಿಯಾಗಿ ದಾಖಲಿಸುವುದು ಬಹಳ ಮುಖ್ಯ.
ನೀವು ಇ-ನಾಮಿನೇಷನ್ ಮಾಡದೇ ಇದ್ದರೆ, ನಿಮ್ಮ ಕುಟುಂಬದವರು ಹಣ ಪಡೆಯಲು EPFO ಕಚೇರಿಗಳಿಗೆ ತೆರಳಿ ಹೆಚ್ಚಿನ ದಾಖಲೆಗಳನ್ನು ಸಲ್ಲಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ನಾಮಿನಿ ವಿವರಗಳನ್ನು ಮುಂಚಿತವಾಗಿ ದಾಖಲಿಸುವುದರಿಂದ ಈ ತೊಂದರೆಗಳನ್ನು ಕಡಿಮೆ ಮಾಡಬಹುದು.
ಆನ್‌ಲೈನ್‌ನಲ್ಲಿ ನಾಮಿನೇಷನ್ ಸಲ್ಲಿಸುವುದು ಹೇಗೆ?
ಇ-ನಾಮಿನೇಷನ್ ಸಲ್ಲಿಸಲು ಗಂಟೆಗಳ ಕಾಲ ಸಮಯ ವ್ಯರ್ಥ ಮಾಡಬೇಕಾಗಿಲ್ಲ. ಕೆಲವೇ ನಿಮಿಷಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
EPFO ಆನ್‌ಲೈನ್ ಪೋರ್ಟಲ್‌ಗೆ ತೆರಳಿ e-Nomination ಆಯ್ಕೆಯನ್ನು ಆರಿಸಬೇಕು. ನಂತರ ಪೋಷಕರು ಅಥವಾ ಜೀವನ ಸಂಗಾತಿಯ ಹೆಸರು ಮತ್ತು ಆಧಾರ್ ವಿವರಗಳನ್ನು ನಮೂದಿಸಬೇಕು. ಅಗತ್ಯವಿರುವ ಫೋಟೋಗಳನ್ನು ಅಪ್‌ಲೋಡ್ ಮಾಡಿ, ವಿವರಗಳನ್ನು ಪರಿಶೀಲಿಸಿದ ನಂತರ ಸಲ್ಲಿಸಬೇಕು.
ನೀವು ಕೂಡಿಟ್ಟಿರುವ ಪಿಎಫ್ ಹಣವು ನಿಮ್ಮ ಕುಟುಂಬಕ್ಕೆ ಸುಲಭವಾಗಿ ತಲುಪಬೇಕಾದರೆ, ನಾಮಿನಿ ವಿವರಗಳನ್ನು ಸರಿಯಾಗಿ ದಾಖಲಿಸಿಟ್ಟುಕೊಳ್ಳುವುದು ಬಹಳ ಮುಖ್ಯ. ನೀವು ಈಗ ಮಾಡುವ ಈ ಸಣ್ಣ ಕೆಲಸವು ಮುಂದೆ ನಿಮ್ಮ ಕುಟುಂಬಕ್ಕೆ ದೊಡ್ಡ ಸಹಾಯವಾಗಬಹುದು.

