HomeKarnatakaಪರಿಶ್ರಮವೇ ಜೀವನದ ಯಶಸ್ಸಿನ ಸೂತ್ರ: ಕೃಷ್ಣ ಭೈರೇಗೌಡ

ಪರಿಶ್ರಮವೇ ಜೀವನದ ಯಶಸ್ಸಿನ ಸೂತ್ರ: ಕೃಷ್ಣ ಭೈರೇಗೌಡ

ಹಾಸನ: ಸಾಧನೆ ಮಾಡಿರುವ ಮಕ್ಕಳೇ ಕುಟುಂಬದ ಮುಕುಟ ಮಣಿಗಳು, ಮಕ್ಕಳು ಉತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇದು ಹಾಸನದ ಹೆಮ್ಮೆ. ಇವರ ಸಾಧನೆ ಇತರರಿಗೆ ಸ್ಪೂರ್ತಿಯಾಗಿದೆ ಎಂದು ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಗರದ ಹಾಸನಾಂಬ ಕಲಾಭವನದಲ್ಲಿ ಆಯೋಜಿಸಿದ್ದ ಹಾಸನದ ಹೆಮ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಪ್ರಯತ್ನ ಮತ್ತು ಪರಿಶ್ರಮದಿಂದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆಯಲು ಸಾಧ್ಯವಾಗಿದೆ. ನಿಮ್ಮೆಲ್ಲರ ಸಾಧನೆ ನಮ್ಮ ಹೃದಯ ತುಂಬಿದೆ. ಇದನ್ನು ಸಂಭ್ರಮಿಸುವ ಕ್ಷಣಕ್ಕಾಗಿ ಹಾಸನದ ಹೆಮ್ಮೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಮಕ್ಕಳ ಸಾಧನೆ ತಂದೆ ತಾಯಿಗೆ ಖುಷಿ ತಂದಿದೆ. ಜೊತೆಗೆ ಕುಟುಂಬಕ್ಕೆ ಗೌರವ ತಂದಿದೆ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಉತ್ತಮ ಸಾಧನೆ ಮಾಡಿರುವ ಮಕ್ಕಳನ್ನು ಅಭಿನಂದಿಸಿ ಪ್ರೋತ್ಸಾಹ ನೀಡುವುದರಿಂದ ಮುಂದಿನ ಸಾಲಿನಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಕ್ಕಳ ಸಾಧನೆಯಲ್ಲಿ ತಂದೆ ತಾಯಿ ಪಾತ್ರ ಕೂಡ ಇರುತ್ತದೆ. ಮಕ್ಕಳೇ ಸಮಾಜದ, ದೇಶದ ಆಸ್ತಿ. ಸಮಾಜದ ಭವಿಷ್ಯ ಉಜ್ವಲವಾಗಬೇಕು. ಭವಿಷ್ಯದಲ್ಲಿ ಕನಸು ನನಸಾಗಲು ಪರಿಶ್ರಮ ಬಹುಮುಖ್ಯ.  ಜೀವನದಲ್ಲಿ ಏನಾದರೂ ಸಂಪಾದನೆ ಮಾಡಬಹುದು ಸಂಪಾದಿಸಿದ್ದನ್ನು ಕಳೆದುಕೊಳ್ಳಬಹುದು. ಆದರೆ, ನಾವು ಗಳಿಸಿದ ವಿದ್ಯೆ ಮತ್ತು ಜ್ಞಾನ ಶಾಶ್ವತವಾಗಿ ಕೊನೆಯ ಉಸಿರು ಇರುವವರೆಗೂ ನಿಮ್ಮೊಂದಿಗೆ ಇರುತ್ತದೆ. ವಿದ್ಯೆಯಿಂದ ನಿಮ್ಮ ಕಾಲ ಮೇಲೆ ನಿಂತು ಜೀವನ ನಡೆಸಬಹುದು. ಜೊತೆಗೆ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಇರುತ್ತದೆ ಎಂದು ತಿಳಿಸಿದರು.

 ಜೀವನದಲ್ಲಿ ಯಶಸ್ಸಿಗೆ ಒಂದೇ ಸೂತ್ರ ಪರಿಶ್ರಮ ಕಷ್ಟಪಟ್ಟವರು ಗುರಿಮುಟ್ಟುತ್ತಾರೆ. ಸೋಲು-ಗೆಲುವಿಗೆ ನಾವೇ ಕಾರಣ. ಛಲ ರೂಢಿಸಿಕೊಂಡು ಸಂಕಲ್ಪ ಮಾಡಿದರೆ ಯಶಸ್ಸು ಕಾಣುತ್ತಾರೆ. ಜೀವನದ ಯಶಸ್ಸಿಗೆ ಕೀಲಿ ಕೈ ಪರಿಶ್ರಮ ಎನ್ನುವುದು ನನ್ನ ಅಭಿಪ್ರಾಯ ಎಂದರು.

ಮೊರಾರ್ಜಿ ದೇಸಾಯಿ ಶಾಲೆ ಹಾಗೂ ಅನುದಾನಿತ ಶಾಲೆಗಳು ಇನ್ನೂ ಉತ್ತಮ ಫಲಿತಾಂಶ ಪಡೆಯಲು ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.

ಸಂಸದರಾದ ಶ್ರೇಯಸ್ ಎಂ. ಪಟೇಲ್ ಅವರು ಮಾತನಾಡಿ, ರಾಜ್ಯಕ್ಕೆ ಒಂದು ಅಪ್ರತಿಮವಾದ ಕೊಡುಗೆಯನ್ನು ನಮ್ಮ ಜಿಲ್ಲೆಯ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯ ವಿದ್ಯಾರ್ಥಿಗಳು ನೀಡಿದ್ದಾರೆ ಇದು ಹೆಮ್ಮೆಯ ವಿಷಯವಾಗಿದೆ ಎಂದರು.

 ಶಿಕ್ಷಣದಿಂದ ಮಾತ್ರ ಗುರಿಯನ್ನು ತಲುಪಲು ಸಾಧ್ಯ ಹಾಗೂ ಶಿಕ್ಷಣದಿಂದ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಅನುಸರಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಮಕ್ಕಳು ಹಾಸನ ಜಿಲ್ಲೆಯನ್ನು ರಾಜ್ಯದ್ಯಾಂತ ತಿರುಗಿ ನೋಡುವಂತ ಕೆಲಸವನ್ನು ಮಾಡಿದ್ದಾರೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದರು.

ಶಾಸಕರು ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಉತ್ತಮ ಕೆಲಸವಾಗಿದೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ವಿದ್ಯಾಭ್ಯಾಸವನ್ನು ಮಾಡಿ ಹಾಸನ ಜಿಲ್ಲೆಗೆ ಕೀರ್ತಿಯನ್ನು ಹೆಚ್ಚಿಸಬೇಕು ಮತ್ತು ಯಶಸ್ವಿನ ದಾರಿಯ ಕಡೆ ಸಾಗಬೇಕು ಎಂದರು.

ಸರ್ಕಾರಿ ಶಾಲೆ ಕಾಲೇಜುಗಳಲ್ಲಿನ ವಿದ್ಯಾಭ್ಯಾಸ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ, ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ಹೇಳಿದರು.

ಪ್ರಪಂಚದ ಪರ್ಯಟನೆಯಲ್ಲಿ ಆಂಗ್ಲ ಭಾಷೆ ಕಲಿಯುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ ಅವರು.ರೈತರು, ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ತಳಹದಿ ಹಾಕಲು ಮಹಾತ್ವಾಕಾಂಕ್ಷಿ ಯೋಜನೆಯಾದ ಕೆ.ಪಿ.ಎಸ್.ಶಾಲೆಗಳನ್ನು ಜಾರಿಗೆ ತರಲು ಸರ್ಕಾರ ಮಹತ್ವ ಪೂರ್ಣವಾದ ಹೆಜ್ಜೆ ಇಟ್ಟಿದೆ ಎಂದು ಎಂದು ತಿಳಿಸಿದರು.

ಶಾಸಕ ಸ್ವರೂಪ ಪ್ರಕಾಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಜಿಲ್ಲೆಯು ರಾಜಕೀಯ, ವಿಜ್ಞಾನ, ಶಿಕ್ಷಣ ಹಾಗೂ ಹಲವಾರು ಕ್ಷೇತ್ರದ ತನ್ನದೇ ಆದ ಛಾಪು ಮೂಡಿಸಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಉತ್ತಮವಾದ ಸಾಧನೆಯನ್ನು ಮಾಡಿ ಜಿಲ್ಲೆಗೆ ಹೆಮ್ಮೆ ತರುವಂತಹ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಶಾಸಕ ಹೆಚ್. ಕೆ ಸುರೇಶ್ ಅವರು ಮಾತನಾಡಿ ಎಂದಿಗೂ ಕಳವು ಆಗದೆ ಇರುವ ಒಂದು ವಿಚಾರವೆಂದರೆ ಅದು ವಿದ್ಯೆ ಮಾತ್ರ ಹಾಗೂ ಶಿಕ್ಷಣದಿಂದ ಮಾತ್ರ ಇತಿಹಾಸವನ್ನು ಬರೆಯಲು ಸಾಧ್ಯ ಎಂದರು.

ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ನನಸು ಮಾಡಿಕೊಂಡು ಸಮಾಜಕ್ಕೆ ಸತ್ಪ್ರಜೆಗಳಾಗಬೇಕು ಮತ್ತು ಗುರಿಗಳನ್ನು ತಲುಪುವುದರ ಮೂಲಕ ಸಾಧನೆಗೈಯಬೇಕು ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಹಾಸನ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ, ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶುಭನ್ವಿತಾ, ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಾಬು, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಬಲರಾಮ್ ಹಾಗೂ ಮತ್ತಿತರರು ಉಪಸ್ಥಿತಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular