ಬೆಂಗಳೂರು: ರಾಜ್ಯದಲ್ಲಿ ಶೇಕಡ 20ರಷ್ಟು ಹೆಚ್ಚುವರಿ ವ್ಯತ್ಯಾಸದೊಂದಿಗೆ 2400 ಚದರಡಿ ನಿವೇಶನದಲ್ಲಿ ನಿರ್ಮಿಸಿದ ವಸತಿ ಕಟ್ಟಡಗಳಿಗೆ ಓಸಿ ಇಲ್ಲದೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ನೀಡಿದ ಗಡುವನ್ನು ಆಗಸ್ಟ್ 15 ರವರೆಗೆ ವಿಸ್ತರಿಸಿಸಲು ಗುರುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
2026 ರ ಮೇ 31ರ ಒಳಗೆ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿದ ಪ್ರಕರಣಗಳಿಗೆ ಸೀಮಿತವಾಗಿ ಅವಕಾಶ ನೀಡಲಾಗಿತ್ತು. ಇದೀಗ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿದ ಮತ್ತು ಯಾವುದೇ ವಿದ್ಯುತ್ ಸಂಪರ್ಕ ಪಡೆಯದೆ ಪೂರ್ಣಗೊಂಡಿರುವ ಪ್ರಕರಣಗಳಿಗೆ ಅನ್ವಯವಾಗುವಂತೆ ಕಾಲಾವಕಾಶ ನೀಡಲಾಗಿದೆ.
2400 ಚದರಡಿ ಅಳತೆಯ ನಿವೇಶನಗಳಲ್ಲಿ ಶೇಕಡ 20ರಷ್ಟು ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ ನಿರ್ಮಿಸಿದ ಜಿ ಪ್ಲಸ್ 3 ಅಂತಸ್ತಿನ ವಸತಿ ಕಟ್ಟಡಗಳು ಅಥವಾ ಸ್ಟಿಲ್ಟ್ ಪಾರ್ಕಿಂಗ್ ಪ್ಲಸ್ ನಾಲ್ಕು ಮಹಡಿ ಹೊಂದಿರುವ ವಸತಿ ಕಟ್ಟಡಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಾಣಿಜ್ಯ ಕಟ್ಟಡಗಳಿಗೆ ಸಂಪರ್ಕ ನೀಡುವ ಕುರಿತಾಗಿ ಅವಕಾಶ ನೀರಿಲ್ಲ ಎಂದು ಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.

