ಬೇಸಿಗೆಯ ಧಗೆ ನೆತ್ತಿ ಸುಡುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ತಡೆಯಲು ಕ್ರಮಗಳನ್ನು ಕೈಗೊಳ್ಳಿ ಎಂದು ಸೂಚಿಸಲಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ಮಾತ್ರವಲ್ಲ ಜಾನುವಾರುಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಕಾಡದಂತೆ ಕ್ರಮ ವಹಿಸಲಾಗಿದೆ.
ಬೇಸಿಗೆಯ ಸವಾಲುಗಳನ್ನು ಎದುರಿಸಲು ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯತ್ಯಯವಾಗದಂತೆ ಹನೂರು ತಾಲೂಕಿನಾದ್ಯಂತ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವು ಕ್ಷಿಪ್ರಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪ್ರಮುಖ ಚಟುವಟಿಕೆಗಳು: ದುರಸ್ತಿ ಮತ್ತು ನಿರ್ವಹಣೆ, ಮಾರ್ಟಳ್ಳಿ ನಾಲ್ ರೋಡ್ ಗ್ರಾಮದಲ್ಲಿ ಕೆಟ್ಟುಹೋಗಿದ್ದ ಮೋಟಾರ್ ಪಂಪ್ ಅನ್ನು ತಕ್ಷಣವೇ ದುರಸ್ತಿಪಡಿಸಿ ನೀರಿನ ಪೂರೈಕೆಯನ್ನು ಸಹಜಸ್ಥಿತಿಗೆ ತರಲಾಗಿದೆ.
ಕಣ್ಣೂರು ಗುಂಡಾಲ್ ಜಲಾಶಯದ ಸಮೀಪದ ಮೋಟಾರ್ ಅನ್ನು ರಿಪೇರಿ ಮಾಡಿ ನೀರು ಬಿಡಲಾಗಿದೆ. ಮಲೆ ಮಹದೇಶ್ವರ ಬೆಟ್ಟದ ಮೆದಾಗನಾಣೆ ಗ್ರಾಮದಲ್ಲಿ ಸೋಲಾರ್ ಮೋಟಾರ್ ದುರಸ್ತಿಪಡಿಸಿ ಯಶಸ್ವಿಯಾಗಿ ಅಳವಡಿಸಲಾಗಿದೆ.
ಮೀಣ್ಯಂ ಗಾಜನೂರು ಗ್ರಾಮದಲ್ಲಿ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ಮೋಟಾರ್ ಅನ್ನು ಸರಿಪಡಿಸಲಾಗಿದೆ. ಕುದೂರು ಕೆಟ್ಟುಹೋಗಿದ್ದ ಕೈ ಪಂಪ್ ಅನ್ನು ದುರಸ್ತಿಗೊಳಿಸಲಾಗಿದೆ.
ಪರ್ಯಾಯ ನೀರಿನ ವ್ಯವಸ್ಥೆ: ಮಾರ್ಟಳ್ಳಿ ನಾಲ್ ರೋಡ್ ಹಾಗೂ ಪುಳೆ ಮರದ ಕುಟಾಯಿ (ಸಂದನ ಪಾಳ್ಯ) ಗ್ರಾಮಗಳಲ್ಲಿ ಖಾಸಗಿ ಬೋರ್‌ಗಳು ಬತ್ತಿಹೋದ ಹಿನ್ನೆಲೆಯಲ್ಲಿ, ಸಾರ್ವಜನಿಕರ ಬೇಡಿಕೆಯಂತೆ ಟ್ಯಾಂಕರ್ ಮೂಲಕ ತುರ್ತಾಗಿ ನೀರು ಪೂರೈಸಲಾಗುತ್ತಿದೆ.
ಶೆಟ್ಟಹಳ್ಳಿ ಭದ್ರಯ್ಯನಹಳ್ಳಿ ಕೆರೆ ಮತ್ತು ಶೆಟ್ಟಹಳ್ಳಿ ಗ್ರಾಮದ ವಿವಿಧ ಪ್ರದೇಶಗಳಿಗೆ ಸ್ಥಳ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ರಾಮಪುರ ಚಂಗದರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ. ಜೊತೆಗೆ ಭೂವಿಜ್ಞಾನಿಗಳ ಮೂಲಕ ಎರಡು ಹೊಸ ಬೋರ್‌ವೆಲ್ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ.
ಎಲ್ಲೆಮಾಳ ಎಂ.ಟಿ.ದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದುಕೊರತೆ ಆಲಿಸಲಾಗಿದೆ.
ನಿಮ್ಮ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ತಕ್ಷಣವೇ ಆಯಾ ತಾಲ್ಲೂಕಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಜನರಿಗೆ ಮನವಿ ಮಾಡಲಾಗಿದೆ.
ಸಹಾಯವಾಣಿ ಸಂಖ್ಯೆಗಳು
- ಜಿಲ್ಲಾ ಪಂಚಾಯತ್ 08226-224015
- ಚಾಮರಾಜನಗರ ತಾಲ್ಲೂಕು 08226-225392
- ಗುಂಡ್ಲುಪೇಟೆ ತಾಲ್ಲೂಕು 08229-200322
- ಕೊಳ್ಳೇಗಾಲ ತಾಲ್ಲೂಕು 08224-252505
- ಹನೂರು ತಾಲ್ಲೂಕು 08224-200130
- ಯಳಂದೂರು ತಾಲ್ಲೂಕು 08226-295166

