ಈ ವರ್ಷ ರಾಜಕೀಯ ವಲಯದಲ್ಲಿ, ಅದರಲ್ಲೂ ಚುನಾವಣೆ ವಿಚಾರವಾಗಿ ಅತಿಹೆಚ್ಚು ಸುದ್ದಿಯಾಗಿದ್ದು ಹಾಗೂ ಅಚ್ಚರಿಯ ಫಲಿತಾಂಶವನ್ನು ನೀಡಿದ ರಾಜ್ಯವೆಂದರೆ ಅದು ತಮಿಳುನಾಡು.
ಹಲವು ದಶಕಗಳ ಕಾಲ ಡಿಎಂಕೆ ಇಲ್ಲವೇ ಎಐಎಡಿಎಂಕೆ ಎನ್ನುತ್ತಿದ್ದ ತಮಿಳುನಾಡಿನ ಜನತೆ ಈ ಬಾರಿ ಟಿವಿಕೆ ಎಂದು ಸಿನಿಮಾ ನಟ ಕಟ್ಟಿದ ಪಾರ್ಟಿಗೆ ಜೈ ಎಂದು ಬಿಟ್ಟರು.
ಅದರಲ್ಲೂ ಆಡಳಿತದಲ್ಲಿದ್ದ ಡಿಎಂಕೆಯಂತಹ ಬಲಿಷ್ಠ ಪಕ್ಷವನ್ನು ಸದೆಬಡೆದು ಬೃಹತ್ ಪಕ್ಷವಾಗಿ ಹೊರಹೊಮ್ಮಿದ ವಿಜಯ್ ಅವರ ಟಿವಿಕೆ ಇತರೆ ಪಕ್ಷಗಳ ಬೆಂಬಲದಿಂದ ಸರ್ಕಾರ ರಚಿಸಿಯೇ ಬಿಟ್ಟಿತು.
ಕೇವಲ ಎರಡು ವರ್ಷಗಳ ಹಿಂದಷ್ಟೇ ಪಕ್ಷವನ್ನು ಘೋಷಿಸಿ, ಚುನಾವಣೆಗೆ ಎರಡು ತಿಂಗಳುಗಳು ಮಾತ್ರ ಬಾಕಿ ಇದೆ ಎನ್ನುವಾಗ ರಸ್ತೆಗಿಳಿದು ಕೆಲಸ ಮಾಡಿದ ವಿಜಯ್ ಸದ್ಯ ಮುಖ್ಯಮಂತ್ರಿ ಕುರ್ಚಿಯನ್ನೇರಿದ್ದಾರೆ.
ಹೀಗೆ ಬೇಗನೆ ವಿಜಯ್ ಮುಖ್ಯಮಂತ್ರಿಯಾದ ಪರಿಯನ್ನು ನೆನೆದು ತೆಲುಗು ನಟ ವೇದಿಕೆಯೊಂದರಲ್ಲಿ ಮಾತನಾಡಿ ತಾವು ಪಕ್ಷ ಕಟ್ಟಲು ಪಟ್ಟ ಕಷ್ಟವನ್ನು ತಮಾಷೆಯಾಗಿ ನೆನೆದು ತಮಿಳುನಾಡಿನಲ್ಲಿ ರಾಜಕೀಯ ಎಷ್ಟು ಸುಲಭ ಎನ್ನುವ ಹಾಗೆ ಮಾತನಾಡಿದ್ದಾರೆ.
ವಿಜಯ್ ರೀತಿಯೇ ಪವನ್ ಕಲ್ಯಾಣ್ ಆಂಧ್ರ ಪ್ರದೇಶದಲ್ಲಿ ತಮ್ಮ ಜನಸೇನಾ ಪಕ್ಷವನ್ನು ಅಧಿಕಾರಕ್ಕೆ ತಂದರು. ಆದರೆ ಟಿವಿಕೆ ರೀತಿಯ ಅಬ್ಬರದ ಗೆಲುವು ಅಲ್ಲಿಲ್ಲ ಹಾಗೂ ಪವನ್ ಉಪ ಮುಖ್ಯಮಂತ್ರಿಯಾಗಿದ್ದಾರೆಯೇ ಹೊರತು ಸಿಎಂ ಆಗಿಲ್ಲ.
ಈ ಕುರಿತು ಮಾತನಾಡಿದ ಪವನ್ ಕಲ್ಯಾಣ್ ‘ತಮಿಳು ನಾಡಿನಲ್ಲಿ ರಾಜಕೀಯವನ್ನು ಎಷ್ಟು ಸುಲಭವಾಗಿ, ಸುಖವಾಗಿ ಮಾಡಿದ್ರು. ನನಗೆ ಅಸೂಯೆ ಹುಟ್ಟುವ ಮಟ್ಟಕ್ಕೆ ಸುಖವಾಗಿ ರಾಜಕೀಯವನ್ನು ಮಾಡಿದ್ರು. ವಿಜಯ್ ಕೇವಲ ಎರಡು ತಿಂಗಳು ಪ್ರಚಾರ ಮಾಡಿ ಸಿಎಂ ಆಗಬಿಟ್ಟ. ಆದರೆ ನಾನು ಹದಿನೈದು ವರ್ಷ ಬೀದಿ ಬೀದಿ ಅಲೆದ್ರೂ ಸಿಎಂ ಆಗಿಲ್ಲ’ ಎಂದು ನಗುತ್ತಲೇ ತಮ್ಮನ್ನೇ ಟೀಕಿಸಿಕೊಂಡರು.
ಮುಂದುವರಿದು ಮಾತನಾಡಿದ ಪವನ್ ಕಲ್ಯಾಣ್ ‘ವಿಜಯ್‌ನ ಕಟ್‌ಔಟ್ ಹಾಗೂ ಹಾಲೊಗ್ರಾಮ್ ಹಾಕಿಕೊಂಡ್ರೆ ಸಾಕು ಅವರಿಗೆ. ಆರಾಮಾಗಿ ಸಿಎಂ ಆಗಿಬಿಟ್ರು. ನಾನು ಹದಿನೈದು ವರ್ಷ ಬೀದಿಬೀದಿಯಲ್ಲಿ ತೋರಿಸಿಕೊಂಡರೂ ಸಹ ಆಗಲಿಲ್ಲ. ಆದರೂ ನಾನು ಬದಲಾವಣೆ ತರಬೇಕು ಎನ್ನುವ ಹುಚ್ಚಿನಿಂದ ಅಷ್ಟು ವರ್ಷ ಕಷ್ಟಪಟ್ಟು ಜನಸೇನಾ ಪಾರ್ಟಿ ಕಟ್ಟಿದೆ’ ಎಂದು ಪವನ್ ಕಲ್ಯಾಣ್ ತಮ್ಮ ಹಾದಿ ತಮಿಳುನಾಡಿನ ರಾಜಕೀಯದ ಹಾಗೆ ಸುಲಭವಾಗಿ ಇರಲಿಲ್ಲ ಎಂದು ಹೇಳಿಕೊಂಡರು.

