ಮಕ್ಕಳ ಕಿಲಕಿಲ ನಗುವಿನಿಂದ ತುಂಬಿರಬೇಕಾದ ಆಸ್ಪತ್ರೆಯ ವಾರ್ಡ್‌ಗಳು ಇದೀಗ ತಮ್ಮ ಕಂದಮ್ಮಗಳನ್ನು ಕಳೆದುಕೊಂಡ ತಾಯಂದಿರ ಆಕ್ರಂದನದಿಂದ ಮರುಗುತ್ತಿವೆ. ಪಶ್ಚಿಮ ಬಂಗಾಳದ ಮಾಲ್ದಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಭವಿಸುತ್ತಿರುವ ಸರಣಿ ಶಿಶುಗಳ ಸಾವುಗಳು ವೈದ್ಯಕೀಯ ವ್ಯವಸ್ಥೆಯನ್ನೇ ಬೆಚ್ಚಿಬೀಳಿಸಿವೆ.
ಹೌದು. ಕೇವಲ ಮೂರು ವಾರಗಳ ಅವಧಿಯಲ್ಲಿ 60 ಮಂದಿ ಶಿಶುಗಳು ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯೆಂಬಂತೆ, ಆಸ್ಪತ್ರೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ 10 ಮಂದಿ ಶಿಶುಗಳು ಮೃತಪಟ್ಟಿದ್ದಾರೆ.
ದುರಂತಕ್ಕೆ ಪ್ರಮುಖ ಕಾರಣಗಳೇನು?
ಆಗಸ್ಟ್‌ನ ಎರಡನೇ ವಾರದಲ್ಲಿ ಒಂದೇ ದಿನ 10 ಮಂದಿ ಶಿಶುಗಳು ಮೃತಪಟ್ಟ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಅವರಲ್ಲಿ ಎಂಟು ಶಿಶುಗಳು ಬೇರೆ ಆಸ್ಪತ್ರೆಗಳಲ್ಲಿ ಜನಿಸಿದ್ದು, ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟ ನಂತರ ಮಾಲ್ದಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಳಿದ ಇಬ್ಬರು ಶಿಶುಗಳು ಇದೇ ಆಸ್ಪತ್ರೆಯಲ್ಲಿ ಜನಿಸಿದ್ದರು.
ವೈದ್ಯರ ಪ್ರಾಥಮಿಕ ಮಾಹಿತಿಯ ಪ್ರಕಾರ, ಹೆಚ್ಚಿನ ಶಿಶುಗಳು ಶ್ವಾಸಕೋಶದ ಸಮಸ್ಯೆ, ತೀವ್ರ ಕಾಮಾಲೆ ಹಾಗೂ ಜನ್ಮಜಾತ ಹೃದಯ ಸಂಬಂಧಿ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ.
ಸಣ್ಣ ಆಸ್ಪತ್ರೆಗಳಿಂದ ತಡವಾಗಿ ರೆಫರ್ ಮಾಡಲಾಗಿತ್ತೇ?
ಒಟ್ಟು 60 ಮಂದಿ ಮೃತಪಟ್ಟ ಶಿಶುಗಳಲ್ಲಿ ಸುಮಾರು 44 ಮಂದಿಯನ್ನು ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್‌ಗಳಿಂದ ರೆಫರ್ ಮಾಡಲಾಗಿತ್ತು ಎಂದು ದಾಖಲೆಗಳು ತಿಳಿಸಿವೆ. ಸಣ್ಣ ಆಸ್ಪತ್ರೆಗಳಲ್ಲಿ ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ದೊರೆಯದೆ, ಪರಿಸ್ಥಿತಿ ಗಂಭೀರವಾದ ಬಳಿಕ ಕೊನೆಯ ಕ್ಷಣದಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿರುವುದೇ ಸಾವಿಗೆ ಪ್ರಮುಖ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಸುತ್ತಮುತ್ತಲಿನ 16 ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳಲ್ಲಿ ದಿಢೀರ್ ತಪಾಸಣೆ ನಡೆಸಿ, ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಉನ್ನತಾಧಿಕಾರಿಗಳಿಂದ ತನಿಖೆಗೆ ಆದೇಶ
ಒಂದೇ ಆಸ್ಪತ್ರೆಯಲ್ಲಿ ಇಷ್ಟೊಂದು ಸಂಖ್ಯೆಯ ಶಿಶುಗಳು ಮೃತಪಟ್ಟಿರುವುದನ್ನು ರಾಜ್ಯ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಘಟನೆಯ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಮಾಲ್ದಾ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಪ್ರಸೇನ್‌ಜಿತ್ ಬಾರ್ ಅವರಿಗೆ ಸೂಚಿಸಲಾಗಿದೆ.
ಮತ್ತೊಂದೆಡೆ, ಮಾಲ್ದಾ ಜಿಲ್ಲಾಧಿಕಾರಿ ಕೂಡ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದು, ಮುಂದಿನ ಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಶಿಶುಗಳ ಸರಣಿ ಸಾವಿಗೆ ಆಸ್ಪತ್ರೆಯ ಆಡಳಿತ ವೈಫಲ್ಯ ಕಾರಣವೇ ಅಥವಾ ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್‌ಗಳ ನಿರ್ಲಕ್ಷ್ಯವೇ ಎಂಬುದು ತನಿಖೆಯ ಬಳಿಕ ಸ್ಪಷ್ಟವಾಗಲಿದೆ.

