ನವದೆಹಲಿ: ಸಂಸತ್ ಬಜೆಟ್ ಅಧಿವೇಶನದ ದ್ವಿತೀಯಾರ್ಧ ಇಂದಿನಿಂದ ಪುನರಾರಂಭವಾಗಲಿದೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಸಲ್ಲಿಸಿದ ವಿಶ್ವಾಸ ನಿರ್ಣಯ ಮಂಡನೆ ಪ್ರಸ್ತಾಪ ಮೊದಲ ದಿನವೇ ಚರ್ಚೆಗೆ ಬರಲಿದೆ.
118 ಸಂಸದರು ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ನೀಡಿರುವ ನೋಟಿಸ್ ಬಗ್ಗೆ ಚರ್ಚೆಗೆ ಕಾಂಗ್ರೆಸ್ ಒತ್ತಾಯಿಸಿದೆ. ನಿರ್ಣಯ ಬೆಂಬಲಿಸುವುದಾಗಿ ಈಗಾಗಲೇ ತೃಣಮೂಲ ಕಾಂಗ್ರೆಸ್ ಹೇಳಿದೆ. ಸೋಮವಾರ ಕಲಾಪ ಆರಂಭವಾಗುತ್ತಲೇ ಅವಿಶ್ವಾಸ ನಿರ್ಣಯದ ಚರ್ಚೆಗೆ ವಿರೋಧ ಪಕ್ಷಗಳು ಮುಗಿಬೀಳಲಿವೆ. ಸೋಮವಾರ ನಿಗದಿಯಾದ ಕಲಾಪ ಪಟ್ಟಿಯಲ್ಲಿ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯದ ವಿಷಯ ಮಾತ್ರ ಇದೆ.
ಸ್ಪೀಕರ್ ಓಂ ಬಿರ್ಲಾ ಅವರು ಸೋಮವಾರ ಕಲಾಪದ ಅಧ್ಯಕ್ಷತೆ ವಹಿಸುವುದಿಲ್ಲ. ಅವರ ವಿರುದ್ಧ ಅವಿಶ್ವಾಸ ನಿರ್ಣಯ ಕೋರಿ ಸಲ್ಲಿಸಿದ ನೋಟಿಸ್ ಅನ್ನು ಸದನ ಚರ್ಚೆಗೆ ಕೈಗೊಳ್ಳುವುದರಿಂದ ಅವರು ಸದಸ್ಯರ ಸಾಲಿನಲ್ಲಿ ಕುಳಿತುಕೊಳ್ಳಲಿದ್ದಾರೆ.
ಜನವರಿ 28 ರಿಂದ ಫೆಬ್ರವರಿ 13ರವರೆಗೆ ಅಧಿವೇಶನದ ಮೊದಲ ಭಾಗ ನಡೆದಿತ್ತು. ಇಂದಿನಿಂದ ಏಪ್ರಿಲ್ 2ರವರೆಗೆ ಅಧಿವೇಶನದ ದ್ವಿತೀಯಾರ್ಧ ನಡೆಯಲಿದೆ.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ, ಮತದಾರರನ್ನು ಪಟ್ಟಿಯಿಂದ ಕೈ ಬಿಟ್ಟಿರುವುದು, ಪಶ್ಚಿಮ ಏಷ್ಯಾ ಸಂಘರ್ಷ, ಅಮೆರಿಕ ವ್ಯಾಪಾರ ಒಪ್ಪಂದ, ರಷ್ಯಾದಿಂದ ತೈಲ ಖರೀದಿ ಮತ್ತಿತರ ವಿಷಯಗಳು ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆ ಇದೆ.

