ಏಕ-ಪರದೆ (Single-screen) ಚಿತ್ರಮಂದಿರಗಳಿಗೆ ಸಿನಿಮಾ ನೋಡಲು ಹೋಗುವವರು ಇನ್ನು ಮುಂದೆ ಪಾರ್ಕಿಂಗ್ಗಾಗಿ ಹಣ ಪಾವತಿಸಬೇಕಿಲ್ಲ. ಚಿತ್ರಮಂದಿರಗಳ ಮಾಲೀಕರಿಗೆ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲು ಅವಕಾಶ ನೀಡಿದ್ದ 2021ರ ಸರ್ಕಾರಿ ಆದೇಶ (GO) 121 ಅನ್ನು ತೆಲಂಗಾಣ ಹೈಕೋರ್ಟ್ ಅಮಾನತುಗೊಳಿಸಿದೆ.
ಮಲ್ಟಿಪ್ಲೆಕ್ಸ್ ಮತ್ತು ಮಾಲ್ಗಳಲ್ಲಿನ ನಿಯಮವೇನು ?
ರಾಜ್ಯದ ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ, ಮಲ್ಟಿಪ್ಲೆಕ್ಸ್ ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ಬರುವ ಗ್ರಾಹಕರು ವ್ಯಾಲಿಡ್ ಬಿಲ್ ಅಥವಾ ಸಿನಿಮಾ ಟಿಕೆಟ್ ತೋರಿಸಿದರೆ ಅವರಿಗೆ ಉಚಿತ ಪಾರ್ಕಿಂಗ್ ಒದಗಿಸುವುದು ಕಡ್ಡಾಯವಾಗಿದೆ. ಆದರೆ, 2021 ರಿಂದ ಏಕ-ಪರದೆ ಚಿತ್ರಮಂದಿರಗಳಿಗೆ ಮಾತ್ರ ಈ ನಿಯಮದಿಂದ ವಿಶೇಷ ವಿನಾಯಿತಿ ನೀಡಲಾಗಿತ್ತು. ಈಗ ಹೈಕೋರ್ಟ್ ಈ ವಿನಾಯಿತಿಯನ್ನು ರದ್ದುಗೊಳಿಸಿ, ಇವುಗಳನ್ನು ಕೂಡ ಮಲ್ಟಿಪ್ಲೆಕ್ಸ್ ಮಾದರಿಯಲ್ಲೇ ಪರಿಗಣಿಸುವಂತೆ ಸೂಚಿಸಿದೆ.
ಕಾನೂನು ಹೋರಾಟದ ಹಿನ್ನೆಲೆ
ದಿಲ್ಸುಖ್ನಗರದ ಕೋಣಾರ್ಕ್ ಚಿತ್ರಮಂದಿರದಲ್ಲಿ ಗ್ರಾಹಕರೊಬ್ಬರಿಂದ ₹20 ಪಾರ್ಕಿಂಗ್ ಶುಲ್ಕ ವಸೂಲಿ ಮಾಡಿದ್ದನ್ನು ಪ್ರಶ್ನಿಸಿ ಪ್ರೇಮ್ ರಾಮಾವತ್ ಎಂಬುವವರು ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಈ ಮಹತ್ವದ ಆದೇಶ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿದ ಹೈಕೋರ್ಟ್ ವಕೀಲ ವಿಜಯ್ ಗೋಪಾಲ್: “2021ರಲ್ಲಿ ಏಕ-ಪರದೆ ಚಿತ್ರಮಂದಿರಗಳ ಮಾಲೀಕರು ಅಂದಿನ ಸರ್ಕಾರವನ್ನು ಸಂಪರ್ಕಿಸಿ ಯಾವುದೇ ಸರಿಯಾದ ಕಾರಣವಿಲ್ಲದೆ ಪಾರ್ಕಿಂಗ್ ನಿಯಮದಿಂದ ವಿನಾಯಿತಿ ಪಡೆದಿದ್ದರು. ಕಾನೂನಿನ ಪ್ರಕಾರ, ವಾಣಿಜ್ಯ ಸಂಸ್ಥೆಯ ಗ್ರಾಹಕರು ಬಿಲ್ ಅಥವಾ ಟಿಕೆಟ್ ಹೊಂದಿದ್ದರೆ ಅವರಿಗೆ ಪಾರ್ಕಿಂಗ್ ಉಚಿತವಾಗಿ ನೀಡಬೇಕು. ಈಗ ಹೈಕೋರ್ಟ್ ಆ ಹಳೆಯ ಆದೇಶವನ್ನು (GO 121) ಅಮಾನತುಗೊಳಿಸಿ ಎಲ್ಲವನ್ನೂ ಸ್ಪಷ್ಟಪಡಿಸಿದೆ,” ಎಂದು ವಿವರಿಸಿದ್ದಾರೆ.
ಇಡೀ ತೆಲಂಗಾಣಕ್ಕೆ ಅನ್ವಯ
ವಕೀಲ ವಿಜಯ್ ಗೋಪಾಲ್ ಅವರು ಸ್ಪಷ್ಟಪಡಿಸಿರುವಂತೆ, ಈ ಆದೇಶವು ಕೇವಲ ಅರ್ಜಿಯಲ್ಲಿ ಉಲ್ಲೇಖಿಸಲಾದ ಚಿತ್ರಮಂದಿರಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ತೆಲಂಗಾಣದಾದ್ಯಂತ ಇರುವ ಎಲ್ಲಾ ಏಕ-ಪರದೆ ಚಿತ್ರಮಂದಿರಗಳಿಗೂ ಅನ್ವಯಿಸುತ್ತದೆ. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು ಮತ್ತು ಸರ್ಕಾರಿ ಆದೇಶದ ಮೂಲಕ ಯಾರಿಗೂ ವಿಶೇಷ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ನಿಯಮ ಕರ್ನಾಟಕದಲ್ಲೂ ಜಾರಿ ಬರಲಿ ಎಂದು ಸಿನಿಪ್ರಿಯರು ಆಶಿಸಿದ್ದಾರೆ.

