ಹೈದರಾಬಾದ್ : ಆಟವಾಡುತ್ತಿದ್ದ ಎಂಟು ತಿಂಗಳ ಕಂದಮ್ಮ ಆಕಸ್ಮಿಕವಾಗಿ ನೀರಿನ ಸಂಪ್‌ಗೆ ಬಿದ್ದು ಮೃತಪಟ್ಟಿರುವ ಘಟನೆ ನಗರದ ಗಂಡಿಪೇಟೆ ಗ್ರಾಮದಲ್ಲಿ ನಡೆದಿದೆ.
ಮಹಾರಾಷ್ಟ್ರ ಮೂಲದ ಶ್ರೀಕಾಂತ್ ಜಾಧವ್ ಮತ್ತು ರಾಧಿಕಾ ಎಂಬ ದಂಪತಿಗಳು ಗಂಡಿಪೇಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಇವರಿಗೆ ಸೌರಭ್ ಜಾಧವ್ ಎಂಬ ಎಂಟು ತಿಂಗಳ ಗಂಡು ಮಗು ಇತ್ತು. ಬುಧವಾರ ಮಧ್ಯಾಹ್ನ ತಾಯಿ ರಾಧಿಕಾ ಮಗುವಿನೊಂದಿಗೆ ಮಲಗಿದ್ದಾಗ, ಮಗು ಎಚ್ಚರಗೊಂಡು ತೆವಳುತ್ತಾ ಹೊರಬಂದಿದೆ. ಈ ವೇಳೆ ಮನೆಯ ಮುಂಭಾಗದಲ್ಲಿದ್ದ ತೆರೆದ ನೀರಿನ ಸಂಪ್‌ಗೆ ಆಕಸ್ಮಿಕವಾಗಿ ಬಿದ್ದಿದೆ.
ಕೆಲ ಸಮಯದ ನಂತರ ಎಚ್ಚರಗೊಂಡ ತಾಯಿ ಮಗು ಕಾಣದೆ ಗಾಬರಿಗೊಂಡಿದ್ದಾರೆ. ಮನೆಯ ಸುತ್ತಮುತ್ತ ಹುಡುಕಾಡಿದಾಗ ಸಂಪ್‌ನ ಮುಚ್ಚಳ ತೆರೆದಿರುವುದು ಕಂಡುಬಂದಿದೆ. ಒಳಗೆ ನೋಡಿದಾಗ ಮಗು ನೀರಿನಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಮಗುವನ್ನು ಹತ್ತಿರದ ರೈನ್‌ಬೋ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಗು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ನಾರ್ಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಂದೆ ಶ್ರೀಕಾಂತ್ ಜಾಧವ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದಂಪತಿಗಳ ಆಕ್ರಂದನ ಮುಗಿಲು ಮುಟ್ಟಿದೆ.

