ಆಂಧ್ರಪ್ರದೇಶ: ರಾಜ್ಯದಲ್ಲಿ ಕರುಣಾಜನಕ ಘಟನೆಯೊಂದು ನಡೆದಿದ್ದು, ಮೈಮೇಲೆ ಬಿಸಿ ನೀರು ಬಿದ್ದ ಪರಿಣಾಮ ಮೂರು ವರ್ಷದ ಪುಟ್ಟ ಮಗು ಮೃತಪಟ್ಟಿದೆ. ಮನೆಯ ಮುಂದೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಮೈಮೇಲೆ ಬಿಸಿ ನೀರು ಬಿದ್ದು ತೀವ್ರವಾಗಿ ಸುಟ್ಟ ಗಾಯಗಳಾಗಿದ್ದ ಮೂರು ವರ್ಷದ ಹೆಣ್ಣು ಮಗು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟಿದೆ.
ಚಿತ್ತೂರು ಜಿಲ್ಲೆಯ ಗಂಗಾಧರ ನೆಲ್ಲೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವೇದೂರುಕುಪ್ಪಂ ಮಂಡಲದ ಪಾತಗುಂಟ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಮೃತ ಪುಟ್ಟ ಬಾಲಕಿಯನ್ನು ಮಧುಶ್ರೀ ಎಂದು ಗುರುತಿಸಲಾಗಿದೆ. ಈಕೆ ಅರುಣ್ ಕುಮಾರ್ ಮತ್ತು ಸೂರ್ಯಲಹರಿ ದಂಪತಿಯ ಕಿರಿಯ ಪುತ್ರಿ.
ಘಟನೆ ಹೇಗೆ ನಡೆಯಿತು?: ವಾರದ ಹಿಂದೆ ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಆ ಸಮಯದಲ್ಲಿ ಒಲೆಯ ಮೇಲಿದ್ದ ಕುದಿಯುವ ಬಿಸಿ ನೀರಿನ ಪಾತ್ರೆ ಆಕಸ್ಮಿಕವಾಗಿ ಮಗುವಿನ ಮೇಲೆ ಉರುಳಿದೆ. ಇದರಿಂದ ಮಗುವಿನ ದೇಹ ಸಂಪೂರ್ಣವಾಗಿ ಸುಟ್ಟುಹೋಗಿತ್ತು.
ಕೂಡಲೇ ಮಗುವನ್ನು ತಿರುಪತಿಯ ಎಸ್.ವಿ.ಆರ್. ರುಯಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ತಮಿಳುನಾಡಿನ ವೆಲ್ಲೂರು ಸಿಎಂಸಿ (CMC) ಆಸ್ಪತ್ರೆಗೆ ದಾಖಲಿಸಲಾಯಿತು. ಹಲವು ದಿನಗಳಿಂದ ಸಾವಿನೊಂದಿಗೆ ಹೋರಾಡುತ್ತಿದ್ದ ಮಧುಶ್ರೀ, ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.ಪುಟ್ಟ ಮಗುವಿನ ಅಕಾಲಿಕ ಮರಣದಿಂದ ಪಾತಗುಂಟ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

