ಬೆಂಗಳೂರು: ರಾಜ್ಯದ ವಿವಿಧ ಜೈಲುಗಳಲ್ಲಿ ಕೈದಿಗಳು ಮೊಬೈಲ್ ಬಳಸುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಜೈಲಿನಲ್ಲಿ ನಡೆಯುವ ಅಕ್ರಮಗಳ ತಡೆಗೆ ಡಿಜಿಪಿ ಅಲೋಕ್ ಕುಮಾರ್ ಕಟ್ಟುನಿಟ್ಟಿನ ಕ್ರಮಗಳಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೈದಿಗಳ ಬಳಿ ಇದ್ದ ಮೊಬೈಲ್ ಹಾಗೂ ನಿಷೇಧಿತ ವಸ್ತುಗಳನ್ನು ಜೈಲು ಸಿಬ್ಬಂದಿ ಜಪ್ತಿ ಮಾಡುತ್ತಿದ್ದಾರೆ. ಹೀಗೆ ಮೊಬೈಲ್ ವಶಕ್ಕೆ ಮುಂದಾದ ಜೈಲು ಸಿಬ್ಬಂದಿಗಳಿಗೆ ಕೈದಿಗಳು ಜೀವ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಹಲವು ಮೊಬೈಲ್ ಫೋನ್‌ಗಳನ್ನು ಡ್ರೈನೇಜ್ ಮಾರ್ಗದಲ್ಲಿ ಬಚ್ಚಿಟ್ಟಿದ್ದೂ ತಿಳಿದು ಬಂದಿತ್ತು. ಕಟ್ಟುನಿಟ್ಟಿನ ನಿಯಮಗಳಿದ್ದರೂ ಈ ರೀತಿಯ ಅಕ್ರಮ ನಡೆಯುತ್ತಿರುವುದು ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಲೆ ಬಿಸಿ ಮಾಡಿದೆ. ಅಷ್ಟೇ ಅಲ್ಲದೆ ಈ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲು ಮುಂದಾದ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿರುವುದೂ ತಿಳಿದುಬಂದಿದೆ.
ಕಳೆದ ಹತ್ತು ದಿನಗಳಲ್ಲಿ ಜೈಲು ಅಧಿಕಾರಿಗಳು 21 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಹುತೇಕ ಫೋನ್‌ಗಳನ್ನು ಹಾಲಿನ ಕವರ್‌ಗಳಲ್ಲಿ ಮೊಬೈಲ್‌ಗಳನ್ನು ಪ್ಯಾಕ್ ಮಾಡಿ ಕೊಳಚೆ ನೀರು ಹರಿಯುವ ಪೈಪ್‌ಗಳಲ್ಲಿ ಮರೆಮಾಚಿ ಇಟ್ಟಿರುವುದು ಪತ್ತೆಯಾಗಿದೆ. ಜೈಲಿನೊಳಗೆ ಜಾಮರ್ ವ್ಯವಸ್ಥೆ ಇದ್ದರೂ ನೆಟ್‌ವರ್ಕ್ ಸಿಗುತ್ತಿರುವುದರ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕೈದಿಗಳ ಜೊತೆ ಜೈಲರ್‌ಗಳು ಹಾಗೂ ವಾರ್ಡರ್‌ಗಳ ಶಾಮೀಲಾಗಿದ್ದಾರೆಯೇ? ಎಂಬ ಶಂಕೆ ಕೂಡ ವ್ಯಕ್ತವಾಗಿದ್ದು, ಎಲ್ಲರನ್ನೂ ವಿಚಾರಣೆ ನಡೆಸಲು ಸೂಚಿಸಲಾಗಿದೆ. ಎಸ್‌ಪಿ ಅಂಶುಕುಮಾರ್ ನೇತೃತ್ವದಲ್ಲಿ ಕೆಲ ಅನುಮಾನಿತ ವಾರ್ಡರ್‌ಗಳನ್ನು ವಿಚಾರಣೆಗೊಳಪಡಿಸಲಾಗುತ್ತಿದೆ.
ಈ ನಡುವೆ ಮೊಬೈಲ್ ವಶಕ್ಕೆ ಪಡೆಯಲು ಮುಂದಾದ ಜೈಲು ಸಿಬ್ಬಂದಿಗೆ ಕೆಲವು ಕೈದಿಗಳು ಜೀವ ಬೆದರಿಕೆ ಹಾಕಿರುವ ಘಟನೆ ಕೂಡ ನಡೆದಿದೆ. ರಿಜ್ವಾನ್ ಅಲಿ ಮತ್ತು ಮೊಹಮ್ಮದ್ ಸಾಧಿಕ್ ವಿರುದ್ಧ ಪ್ರಕರಣ ದಾಖಲಾಗಿದೆ. ಸಿಬ್ಬಂದಿಗಳಿಗೆ ನೀವು ಮನೆಗೆ ಹೋಗುವುದಿಲ್ಲ, ನಿಮ್ಮನ್ನು ಸ್ಮಶಾನಕ್ಕೆ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ ಆರೋಪ ಇದೆ. ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

