126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯದಲ್ಲಿ 3ನೇ ಬಾರಿಗೆ ಅಧಿಕಾರ ಪಡೆಯುವ ಉತ್ಸಾಹದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಪ್ರಚಾರ ಚುರುಕುಗೊಳಿಸಿದೆ. ಬಿಜೆಪಿ ವಿಧಾನಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ‘ಸಂಕಲ್ಪ ಪತ್ರ’ವನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಇಂದು ಬೆಳಗ್ಗೆ ಗೌಹಾತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸ್ಸಾಂ ವಿಧಾನಸಭೆ ಚುನಾವಣೆ 2026ಕ್ಕೆ ಬಿಜೆಪಿಯು ತನ್ನ ‘ಸಂಕಲ್ಪ ಪತ್ರ’ವನ್ನು (ಚುನಾವಣಾ ಪ್ರಣಾಳಿಕೆ) ಬಿಡುಗಡೆ ಮಾಡಿದೆ.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಸರ್ಬಾನಂದ ಸೋನೊವಾಲ್, ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಸೈಕಿಯಾ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಕಲ್ಪ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಸಿಎಂ ಹಿಮಂತ ಬಿಸ್ವ ಶರ್ಮಾ, ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ (UCC) ಜಾರಿ ಮತ್ತು ಎರಡು ಲಕ್ಷ ಉದ್ಯೋಗಗಳ ಭರವಸೆ ನೀಡಿದ್ದಾರೆ.
ಬಿಜೆಪಿ ಸಂಕಲ್ಪ ಪತ್ರ ಪ್ರಮುಖ ಭರವಸೆಗಳು
- 6ನೇ ಅನುಸೂಚಿ (Sixth Schedule) ಮತ್ತು ಪಂಗಡದ (ST) ಪ್ರದೇಶಗಳನ್ನು ಹೊರತುಪಡಿಸಿ, ಅಸ್ಸಾಂನಲ್ಲಿ ಯುಸಿಸಿ ಜಾರಿ
- ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮ
- ಅಸ್ಸಾಂ ಪ್ರವಾಹ ಮುಕ್ತವಾಗಿಸಲು ಪ್ರಯತ್ನ ಮತ್ತು ಮೊದಲ ಎರಡು ವರ್ಷಗಳಲ್ಲಿ ಈ ಯೋಜನೆಗಾಗಿ ₹18,000 ಕೋಟಿ ವೆಚ್ಚ
- ಮುಂದಿನ 5 ವರ್ಷಗಳಲ್ಲಿ 2 ಲಕ್ಷ ಉದ್ಯೋಗಗಳನ್ನು ನೀಡುವ ಗುರಿ
- ಒಂದು ಜಿಲ್ಲೆ, ಒಂದು ವೈದ್ಯಕೀಯ ಕಾಲೇಜು, ಒಂದು ವಿಶ್ವವಿದ್ಯಾಲಯ ಮತ್ತು ಒಂದು ಎಂಜಿನಿಯರಿಂಗ್ ಕಾಲೇಜು ನಿರ್ಮಾಣದ ಗುರಿ.

