ಹುಬ್ಬಳ್ಳಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯಕ್ಕೆ ಅಂಕ ತೆಗೆದು ಗ್ರೇಡಿಂಗ್ ನೀಡುವ ನಿರ್ಣಯ ಕೈಗೊಂಡ ರಾಜ್ಯ ಸರ್ಕಾರಕ್ಕೆ ಸಾಮಾನ್ಯ ಜ್ಞಾನ ಇಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನೀತಿಯನ್ನು ಕೈ ಬಿಟ್ಟು ಮೊದಲಿನ ಪದ್ದತಿಯನ್ನೇ ಮುಂದುವರೆಸಬೇಕು. ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಗ್ರೇಡ್ ನೀಡುವ ಶಿಕ್ಷಣ ಇಲಾಖೆ ನಿರ್ಧಾರ ಖಂಡನೀಯ. ಹಿಂದಿ ಅಲ್ಲದೆ ಕೆಲವು ಕಡೆ ತೃತೀಯ ಭಾಷೆಯಾಗಿ ಕನ್ನಡ, ಸಂಸ್ಕೃತ, ಉರ್ದು, ಇಂಗ್ಲಿಷ್, ಮರಾಠಿ ಭಾಷೆಗಳಿವೆ. ಇದಕ್ಕೂ ಹೊಡೆತ ಬೀಳಲಿದೆ ಎಂದಿದ್ದಾರೆ.
ಈಗಾಗಲೇ ಶಿಕ್ಷಕರು ಒಂದು ವರ್ಷ ಮಕ್ಕಳಿಗೆ ಹಿಂದಿ ವಿಷಯದಲ್ಲಿ ಪಾಠ ಮಾಡಿದ್ದಾರೆ. ತಜ್ಞರೊಂದಿಗೆ ಚರ್ಚೆ ನಡೆಸದೇ ಪರೀಕ್ಷಾ ಸಮಯದಲ್ಲೇ ಇಂತಹ ನಿರ್ಧಾರ ಕೈಗೊಂಡಿರುವುದು ಸರಿಯಲ್ಲವೆಂದು ಹೊರಟ್ಟಿ ಹೇಳಿದ್ದಾರೆ.
ಮಕ್ಕಳ ಕಲಿಕೆಯ ವಿಷಯದಲ್ಲಿ ದ್ವಿಭಾಷಾ ನೀತಿ ಸರಿಯಲ್ಲ. ಆಡಳಿತ ಭಾಷೆ ಮಾಡುವಂತೆ ನಾನು ಒತ್ತಾಯಿಸುವುದಿಲ್ಲ. ಆದರೆ ಶಾಲಾ-ಕಾಲೇಜುಗಳಲ್ಲಿ ಕಲಿಯುವ ವಿಷಯದಲ್ಲಿ ಬದಲಾವಣೆ ಮಾಡುವುದು ಸರಿಯಲ್ಲ. ಈಗ ಹಿಂದಿ ಭಾಷೆಗೆ ಅಂಕ ತೆಗೆದು ಗ್ರೇಡ್ ನೀಡಿದ್ದಾರೆ. ಮುಂದೆ ಎಲ್ಲಾ ಭಾಷೆಗಳಿಗೂ ಗ್ರೇಡ್ ಕೇಳುತ್ತಾರೆ. ನೀಡಲು ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

