ಮುಂಬೈ: ಶಾಸಕರೊಬ್ಬರು ಭಿಕ್ಷುಕನಂತೆ ವೇಷ ತೊಟ್ಟು ರಸ್ತೆ ಬದಿ ಭಿಕ್ಷಾಟನೆ ಮಾಡಿರುವ ಘಟನೆ ನಡೆದಿದ್ದು, ಶಾಸಕರ ಈ ನಡೆ ಭಾರಿ ಚರ್ಚೆಗೆ ಕಾರಣವಾಗಿದೆ.
ಮುಂಬೈನ ಘಾಟ್‌ಕೋಪರ್ ಈಸ್ಟ್ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ ಭಿಕ್ಷಾಟನೆ ಮಾಡಿರುವ ಶಾಸಕ. ಭದ್ರತಾ ಸಿಬ್ಬಂದಿ, ಐಷಾರಾಮಿ ಕಾರುಗಳು ಮತ್ತು ದುಬಾರಿ ವಸ್ತುಗಳನ್ನೆಲ್ಲ ಬಿಟ್ಟು ಭಿಕ್ಷುಕನಂತೆ ವೇಶ ತೊಟ್ಟು ರಸ್ತೆ ಬದಿ ಬಿಕ್ಷಾಟನೆ ಮಾಡಿದ್ದಾರೆ.
ಸುಮಾರು 5 ಸಾವಿರ ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದಿರುವ ಉದ್ಯಮಿಯೂ ಆಗಿರುವ ಪರಾಗ್ ಶಾ ಭಿಕ್ಷಾಟನೆ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ಜೈನ ಧರ್ಮದ ಚಾತುರ್ಮಾಸದ ಹಿನ್ನೆಲೆಯಲ್ಲಿ ಶಾಸಕ ಪರಾಗ್ ಶಾ ಅವರು ತಮ್ಮ ಧರ್ಮಗುರು ನಮ್ರಮುನಿ ಅವರ ಸಲಹೆಯಂತೆ ಈ ಆತ್ಮಾನುಭವ ಪಡೆಯಲು ನಿರ್ಧರಿಸಿದ್ದರು. ಶಾಸಕರು ಮುಖಕ್ಕೆ ವಿಶೇಷ ಮೇಕಪ್ ಮಾಡಿಕೊಂಡು, ಹರಿದ-ಸಾಧಾರಣ ಬಟ್ಟೆಗಳನ್ನು ಧರಿಸಿ ಕಂಪ್ಲೀಟ್ ಆಗಿ ಭಿಕ್ಷುಕನ ರೂಪ ತಳೆದು ಭಿಕ್ಷೆ ಬೇಡಿದ್ದಾರೆ.
ಘಾಟ್‌ಕೋಪರ್‌ನ ರಸ್ತೆಗಳಲ್ಲಿ ದಿನವಿಡೀ ಭಿಕ್ಷೆ ಬೇಡುತ್ತಾ ಓಡಾಡಿದರೂ ಸಹ ಅವರ ಸ್ವಂತ ಕ್ಷೇತ್ರದ ಜನರಿಗಾಗಲಿ ಅಥವಾ ಹತ್ತಿರದವರಿಗಾಗಲಿ ಅವರು ಶಾಸಕ ಪರಾಗ್ ಶಾ ಎಂಬುದು ಗೊತ್ತಾಗಿಲ್ಲ. ಸಾರ್ವಜನಿಕರಿಂದ ಸಿಕ್ಕ ಭಿಕ್ಷೆಯ ಹಣ ಹಾಗೂ ಆಹಾರವನ್ನೇ ಸೇವಿಸಿ, ಸಾಮಾನ್ಯ ಭಿಕ್ಷುಕ ಅನುಭವಿಸುವ ಕಷ್ಟ, ಸವಾಲುಗಳು ಮತ್ತು ಜನರ ನಡವಳಿಕೆಯನ್ನು ಪ್ರತ್ಯಕ್ಷವಾಗಿ ಅನುಭವಿಸಿದರು.
ಒಂದು ಇಡೀ ದಿನದ ಭಿಕ್ಷುಕನ ವೇಷದ ಪ್ರಯೋಗ ಮುಗಿದ ಬಳಿಕ, ಪರಾಗ್ ಶಾ ಅವರು ತಮ್ಮ ಮೇಕಪ್ ತೆಗೆದು ಸಾಮಾನ್ಯ ಶಾಸಕರಾಗಿ ಜನರ ಮುಂದೆ ಬಂದರು. ತಮಗೆ ಲಭಿಸಿದ ಈ ಅಪರೂಪದ ಜೀವನಪಾಠ ಮತ್ತು ರಸ್ತೆಯಲ್ಲಿದ್ದಾಗ ಜನರು ತೋರಿದ ಪ್ರತಿಕ್ರಿಯೆಗಳ ಬಗ್ಗೆ ಗುರುಗಳು ಹಾಗೂ ಸಾರ್ವಜನಿಕರ ಬಳಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕೋಟ್ಯಧಿಪತಿ ಶಾಸಕ ರಸ್ತೆಯಲ್ಲಿ ಭಿಕ್ಷುಕನಾಗಿ ನಿಂತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ದಾಳಿ ಪ್ರಕರಣ: ಇಡಿ ನಿರ್ದೇಶಕ ರಾಹುಲ್ ನವೀನ್ ನೇತೃತ್ವದಲ್ಲಿ ಮಹತ್ವ ಸಭೆ; ದಾಖಲೆಗಳ ಪರಿಶೀಲನೆ
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿಗೆ ಎಂಟ್ರಿ ಕೊಟ್ಟಿರುವ ಇಡಿ ನಿರ್ದೇಶಕ ರಾಹುಲ್ ನವೀನ್ ಮಹತ್ವದ ಸಭೆ ನಡೆಸಿದ್ದಾರೆ.
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಇಡಿ ಕಚೇರಿಯಲ್ಲಿ ನಿರ್ದೇಶಕ ರಾಹುಲ್ ನವೀನ್ ನೇತೃತ್ವದಲ್ಲಿ ಸಭೆ ನಡೆದಿದ್ದು, ದಾಳಿ ವೇಳೆ ಜಪ್ತಿಯಾದ ಹಣ, ವಿದೇಶಿ ಕರೆನ್ಸಿ ಹಾಗೂ ದಾಖಲೆಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ದೆಹಲಿಯಿಂದ ಆಗಮಿಸಿರುವ ಇಡಿ ಹಿರಿಯ ಅಧಿಕಾರಿಗಳು, ಸ್ಪೆಷಲ್ ಡೈರೆಕ್ಟರ್ ಹಾಗೂ ತಾಂತ್ರಿಕ ಸಮಿತಿ ತಂಡ ಸಭೆಯಲ್ಲಿ ಭಾಗವಹಿಸಿದೆ. ತನಿಖೆಯ ಮುಂದಿನ ಹಂತಗಳು, ವಿಚಾರಣೆ ಹಾಗೂ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆದಿದೆ. ದೆಹಲಿ ತಂಡ ಇನ್ನೂ ಎರಡು ದಿನ ಬೆಂಗಳೂರಿನಲ್ಲೇ ಉಳಿದು ದಾಖಲೆಗಳ ಪರಿಶೀಲನೆ ಮುಂದುವರಿಸಲಿದೆ.
ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮೇಲಿನ ದಾಳಿಯ ಸಂದರ್ಭದಲ್ಲಿ, ಇಡಿ ಅಧಿಕಾರಿಗಳು 3 ಕೋಟಿ ರೂಪಾಯಿಗೂ ಅಧಿಕ ನಗದು ಮತ್ತು ಗಣನೀಯ ಪ್ರಮಾಣದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ, ಹಲವಾರು ಮಹತ್ವದ ದಾಖಲೆಗಳನ್ನು ಸಹ ಜಪ್ತಿ ಮಾಡಿದ್ದರು. ಈ ಜಪ್ತಿ ಮಾಡಿದ ಹಣ ಮತ್ತು ದಾಖಲೆಗಳ ಕುರಿತು ಸಭೆಯಲ್ಲಿ ಮರುಪರಿಶೀಲನೆ ನಡೆಸಲಾಯಿತು. ತನಿಖೆಯ ಮುಂದಿನ ಹಂತಗಳು, ಸತೀಶ್ ಜಾರಕಿಹೊಳಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯಿತು. ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಇಡಿ ಅಧಿಕಾರಿಗಳ ತಂಡವು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಉಳಿದು ಕಾರ್ಯನಿರ್ವಹಿಸಲಿದೆ.
ಇಡಿ ನೀಡಿರುವ ಮಾಧ್ಯಮ ಪ್ರಕಟಣೆಯ ಪ್ರಕಾರ, ವಿದೇಶಗಳಲ್ಲಿ ಅಕ್ರಮ ಹೂಡಿಕೆಗಳು ನಡೆದಿರುವ ಬಗ್ಗೆ ಆರೋಪಗಳಿವೆ. ನಿರ್ದಿಷ್ಟವಾಗಿ, ಆಫ್ರಿಕಾದ ಕಾಂಗೋದಲ್ಲಿ ಚಿನ್ನದ ಗಣಿಗಾರಿಕೆ ಕಂಪನಿಯೊಂದರಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಶೇಕಡಾ 40ರಷ್ಟು ಪಾಲುದಾರಿಕೆ ಇರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಇದಲ್ಲದೆ, ಪಶ್ಚಿಮ ಬಂಗಾಳದಲ್ಲಿ ಮೂಲಸೌಕರ್ಯ ಯೋಜನೆಗಳ ಟೆಂಡರ್‌ಗಳಿಗೆ ಸಂಬಂಧಿಸಿದಂತೆ ಕಿಕ್‌ಬ್ಯಾಕ್ ಹಣವನ್ನು ನೇರವಾಗಿ ಸ್ವೀಕರಿಸದೆ, ಬದಲಿಗೆ ಆಫ್ರಿಕಾದ ಕಂಪನಿಗಳಲ್ಲಿ ಕುಟುಂಬ ಸದಸ್ಯರ ಹೆಸರಿನಲ್ಲಿ ಹೂಡಿಕೆ ಮಾಡಿರುವ ಬಗ್ಗೆಯೂ ಆರೋಪಗಳಿವೆ. ಈ ಆಯಾಮಗಳಲ್ಲಿ ಇಡಿ ತನಿಖೆಯನ್ನು ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯ ಗುತ್ತಿಗೆಗಳಲ್ಲಿ ಲಂಚ ಪಡೆದಿರುವ ಆರೋಪಗಳ ಬಗ್ಗೆಯೂ ಇಡಿ ಮಾಹಿತಿ ಕಲೆಹಾಕುತ್ತಿದೆ. ಸತೀಶ್ ಜಾರಕಿಹೊಳಿ ಸಚಿವರಾದ ಬಳಿಕ ಕರೆಯಲಾದ ಟೆಂಡರ್‌ಗಳು, ಗುತ್ತಿಗೆ ಪಡೆದ ಕಂಪನಿಗಳು, ಟೆಂಡರ್ ಮೊತ್ತ ಹಾಗೂ ನಿರ್ದಿಷ್ಟ ಕಂಪನಿಗೆ ಗುತ್ತಿಗೆ ನೀಡಲು ಹಣ ಪಡೆದಿರುವ ಆರೋಪಗಳ ಕುರಿತು ಪರಿಶೀಲನೆ ನಡೆಯುತ್ತಿದೆ.
ಸೆಪ್ಟೆಂಬರ್ 13 ರಂದು ಸಹ ಕಡತಗಳ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು, ಇಂದು ಕೂಡ ಜಾಲಹಳ್ಳಿ ಕಚೇರಿಯಲ್ಲಿ ತನಿಖೆ ಮುಂದುವರಿಸಿದ್ದಾರೆ.
ಇನ್ನು ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, ಇಡಿ ಅಧಿಕಾರಿಗಳು ಯಾವುದೇ ವಿಚಾರಣೆಗೆ ಕರೆದರೂ ಸಹಕರಿಸಲು ಮತ್ತು ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ.

