ಸಂಜೆಯ ಚಹಾ ಸಮಯಕ್ಕೆ ಅಥವಾ ಮನೆಯಲ್ಲಿ ಸಣ್ಣಪುಟ್ಟ ಪಾರ್ಟಿ ಆಯೋಜಿಸಿದಾಗ ಕ್ರಿಸ್ಪಿಯಾದ ಮತ್ತು ರುಚಿಕರವಾದ ಸ್ನ್ಯಾಕ್ಸ್ ಇದ್ದರೆ ಅದರ ಮಜಾವೇ ಬೇರೆ. ಅಂತಹ ಸಂದರ್ಭಗಳಲ್ಲಿ ಅತಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಅತ್ಯುತ್ತಮ ಸ್ಟಾರ್ಟರ್ ಎಂದರೆ ಪನೀರ್ ಫಿಂಗರ್ಸ್. ಇದನ್ನು ಮನೆಯಲ್ಲೇ ಹೋಟೆಲ್ ಶೈಲಿಯಲ್ಲಿ ಹೇಗೆ ತಯಾರಿಸಬಹುದು ಎಂಬುದರ ವಿವರ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
-
ಪನೀರ್ – ಇನ್ನೂರು ಗ್ರಾಂ
-
ಮೈದಾ ಹಿಟ್ಟು – ಅರ್ಧ ಕಪ್
-
ಕಾರ್ನ್ ಫ್ಲೋರ್ – ಎರಡು ಚಮಚ
-
ಬ್ರೆಡ್ ಕ್ರಂಬ್ಸ್ – ಅರ್ಧ ಕಪ್
-
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಒಂದು ಚಮಚ
-
ಧನಿಯಾ ಪುಡಿ – ಒಂದು ಚಮಚ
-
ಅಚ್ಚಖಾರada ಪುಡಿ – ಒಂದು ಚಮಚ
-
ಚಾಟ್ ಮಸಾಲ – ಅರ್ಧ ಚಮಚ
-
ಕಾಳುಮೆಣಸಿನ ಪುಡಿ – ಒಂದು ಚಮಚ
-
ಒರೆಗಾನೊ – ಒಂದು ಚಮಚ
-
ಒಣ ಮೆಣಸಿನಕಾಯಿ ಚೂರುಗಳು (ಚಿಲ್ಲಿ ಫ್ಲೇಕ್ಸ್) – ಒಂದು ಚಮಚ
-
ರುಚಿಗೆ ತಕ್ಕಷ್ಟು ಉಪ್ಪು
-
ಕರಿಯಲು ಅಗತ್ಯವಿರುವಷ್ಟು ಎಣ್ಣೆ
ತಯಾರಿಸುವ ಸರಳ ವಿಧಾನ:
ಮೊದಲಿಗೆ ಪನೀರ್ ತುಂಡುಗಳನ್ನು ಉದ್ದುದ್ದವಾಗಿ ಅಂದರೆ ಫಿಂಗರ್ಸ್ ಆಕಾರದಲ್ಲಿ ಕತ್ತರಿಸಿಕೊಳ್ಳಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಧನಿಯಾ ಪುಡಿ, ಚಾಟ್ ಮಸಾಲ ಮತ್ತು ಸ್ವಲ್ಪ ಉಪ್ಪು ಸೇರಿಸಿ ಹಗುರವಾಗಿ ಮಿಶ್ರಣ ಮಾಡಿ. ಈ ಮಸಾಲೆಯು ಪನೀರ್ ತುಂಡುಗಳಿಗೆ ಚೆನ್ನಾಗಿ ಹಿಡಿಯಲು ಸುಮಾರು ಹದಿನೈದು ನಿಮಿಷಗಳ ಕಾಲ ನೆನೆಯಲು ಬಿಡಿ.
ಈ ನಡುವೆ ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಕಾಳುಮೆಣಸಿನ ಪುಡಿ, ಚಿಲ್ಲಿ ಫ್ಲೇಕ್ಸ್, ಒರೆಗಾನೊ ಮತ್ತು ಸ್ವಲ್ಪ ಉಪ್ಪು ಸೇರಿಸಿ, ನೀರು ಹಾಕಿ ತೆಳುವಾದ ಮಿಶ್ರಣವನ್ನು ಸಿದ್ಧಪಡಿಸಿಕೊಳ್ಳಿ.
ಈಗ ಮಸಾಲೆ ಹಚ್ಚಿಟ್ಟ ಪನೀರ್ ತುಂಡುಗಳನ್ನು ಒಂದೊಂದಾಗಿ ತೆಗೆದುಕೊಂಡು, ಮೊದಲು ಒಣ ಮೈದಾ ಹಿಟ್ಟಿನಲ್ಲಿ ಹೊರಳಿಸಿ, ನಂತರ ಸಿದ್ಧಪಡಿಸಿದ ಹಿಟ್ಟಿನ ಮಿಶ್ರಣದಲ್ಲಿ ಅದ್ದಬೇಕು. ಕೊನೆಯದಾಗಿ ಇದನ್ನು ಬ್ರೆಡ್ ಕ್ರಂಬ್ಸ್ ನಲ್ಲಿ ಚೆನ್ನಾಗಿ ಉರುಳಿಸಿ ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಿ.
ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಸಿದ್ಧಪಡಿಸಿಕೊಂಡ ಪನೀರ್ ತುಂಡುಗಳನ್ನು ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಕರಿಯಿರಿ. ಈಗ ಬಿಸಿಬಿಸಿಯಾದ ಮತ್ತು ಗರಿಗರಿಯಾದ ಪನೀರ್ ಫಿಂಗರ್ಸ್ ಸವಿಯಲು ಸಿದ್ಧ. ಇದನ್ನು ಪುದೀನಾ ಚಟ್ನಿ ಅಥವಾ ಟೊಮೆಟೊ ಕೆಚಪ್ ಜೊತೆ ತಿಂದರೆ ಅದ್ಭುತ ರುಚಿ ನೀಡುತ್ತದೆ.

