HomeLatest Newsಬೆಂಗಳೂರು ಗ್ರಾಮಾಂತರದಲ್ಲಿ ಪಂಚಾಯ್ತಿ ಆಸ್ತಿ ರಕ್ಷಣೆಗೆ ಹೊಸ ಕ್ರಮ

ಬೆಂಗಳೂರು ಗ್ರಾಮಾಂತರದಲ್ಲಿ ಪಂಚಾಯ್ತಿ ಆಸ್ತಿ ರಕ್ಷಣೆಗೆ ಹೊಸ ಕ್ರಮ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಮತ್ತು ಪಂಚಾಯ್ತಿ ಸೃಜಿಸಿರುವ ಎಲ್ಲ ಸರ್ಕಾರಿ ಆಸ್ತಿಗಳನ್ನು ಜಿಯೋಟ್ಯಾಗ್ ಮಾಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ Eshwar Khandre ಸ್ಪಷ್ಟ ಸೂಚನೆ ನೀಡಿದ್ದಾರೆ.

ದೇವನಹಳ್ಳಿಯ ಜಿಲ್ಲಾ ಪಂಚಾಯ್ತಿ ಕಾರ್ಯಾಲಯದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿಗಳ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಭೂಮಿಗೆ ಬಂಗಾರದ ಬೆಲೆ ಇದ್ದು, ಪಂಚಾಯ್ತಿಯ ಯಾವುದೇ ಆಸ್ತಿ ಕಬಳಿಕೆ ಆಗದಂತೆ ಹಾಗೂ ಗುಣಮಟ್ಟದ ಖಾತ್ರಿಗಾಗಿ ಜಿಯೋಟ್ಯಾಗ್ ಮಾಡಲು ಸೂಚಿಸಿರುವುದಾಗಿ ತಿಳಿಸಿದರು.

ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್‌ಗೆ ಸಂಪೂರ್ಣ ತಡೆ

ರಾಜ್ಯದಲ್ಲಿ ಇಂದಿಗೂ 7,483 ಶೌಚಗುಂಡಿ ಕಾರ್ಮಿಕರು (ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್) ಇದ್ದಾರೆ ಎಂದು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿದ ಸಚಿವರು, ಯಾವುದೇ ಮಲಗುಂಡಿಯ ಸ್ವಚ್ಛತೆಯನ್ನು ಕಾರ್ಮಿಕರಿಂದ ಮಾಡಿಸಿದರೆ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವಚ್ಛತಾ ಕಾರ್ಯಗಳನ್ನು ಯಂತ್ರಗಳ ಮೂಲಕವೇ ನಡೆಸಬೇಕು. ಇದಕ್ಕಾಗಿ ಅಗತ್ಯವಿರುವ ಜೆಟ್ಟಿಂಗ್ ಮತ್ತು ಸಕ್ಕಿಂಗ್ ಯಂತ್ರಗಳನ್ನು ಖರೀದಿಸಲಾಗುವುದು ಎಂದು ಹೇಳಿದರು.

ಪಂಚಾಯ್ತಿ ಮಟ್ಟದಲ್ಲೂ ಎಫ್‌ಎಸ್‌ಟಿಪಿ ನಿರ್ಮಾಣ

ತಾವು ಪೌರಾಡಳಿತ ಸಚಿವರಾಗಿದ್ದ ಅವಧಿಯಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕ (FSTP) ನಿರ್ಮಾಣಕ್ಕೆ ಯೋಜನೆ ರೂಪಿಸಿ ದೇವನಹಳ್ಳಿಯಲ್ಲಿ ಒಂದು ಘಟಕ ಸ್ಥಾಪಿಸಲಾಗಿತ್ತು ಎಂದು ಸ್ಮರಿಸಿದ ಅವರು, ಈಗ ಪಂಚಾಯ್ತಿ ಮಟ್ಟದಲ್ಲೂ ಎಫ್‌ಎಸ್‌ಟಿಪಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಬಿಜಿ ರಾಮ್ ಜೀ ಯೋಜನೆಗೆ ಕೇಂದ್ರದ ಅನುದಾನ ಹೆಚ್ಚಳಕ್ಕೆ ಆಗ್ರಹ

ಯುಪಿಎ ಸರ್ಕಾರ ಜಾರಿಗೆ ತಂದ ಮನ್ರೇಗಾದ ಬದಲಾದ ರೂಪವಾದ ವಿಬಿಜಿ ರಾಮ್ ಜೀ ಯೋಜನೆ ಜುಲೈ 1ರಿಂದ ಜಾರಿಗೆ ಬರಲಿದ್ದು, ಕೇಂದ್ರ ಸರ್ಕಾರದ ಅನುದಾನವನ್ನು ಮನ್ರೇಗಾದಲ್ಲಿದ್ದ 90:10 ಅನುಪಾತದಲ್ಲಿಯೇ ಮುಂದುವರಿಸಬೇಕು ಅಥವಾ ಕನಿಷ್ಠ 80:20ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿರುವುದಾಗಿ ಸಚಿವರು ಹೇಳಿದರು.

60 ದಿನಗಳ ಕೆಲಸದ ವಿರಾಮ ರದ್ದುಪಡಿಸಲು ಒತ್ತಾಯ

ಜೂನ್ 28 ಮತ್ತು 29ರಂದು ನಡೆಯಲಿರುವ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರ ಸಭೆಯಲ್ಲಿ ಭಾಗವಹಿಸಿ, ಯೋಜನೆಯಡಿ ಕೈಗೊಳ್ಳಬೇಕಾದ ಕಾಮಗಾರಿಗಳ ಆಯ್ಕೆ ಸ್ವಾತಂತ್ರ್ಯವನ್ನು ರಾಜ್ಯಗಳಿಗೆ ನೀಡಬೇಕು ಹಾಗೂ 60 ದಿನಗಳ ಕೆಲಸದ ವಿರಾಮದ ನಿಯಮವನ್ನು ಕೈಬಿಡಬೇಕು ಎಂದು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಇ-ಸ್ವತ್ತು ಸರ್ವರ್ ಸಮಸ್ಯೆಗೆ ಪರಿಹಾರ

ಇ-ಸ್ವತ್ತು ಪಡೆಯುವಲ್ಲಿ ಎದುರಾಗುತ್ತಿರುವ ಸರ್ವರ್ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.

ಪೂರ್ವಜರಿಂದ ಬಂದ ಆಸ್ತಿಗಳಿಗೆ ದಾಖಲೆಗಳಿಲ್ಲದ ಗ್ರಾಮೀಣರಿಗೆ ದಾಖಲೆ ವಿನಾಯಿತಿ ನೀಡಿ, ಸ್ವಾಧೀನಾನುಭವದ ಆಧಾರದ ಮೇಲೆ ಆಸ್ತಿ ಹಕ್ಕು ನೀಡುವ ಸಾಧ್ಯತೆಗಳ ಕುರಿತೂ ಪರಿಶೀಲನೆ ನಡೆಯುತ್ತಿದೆ ಎಂದರು.

ಈ ವರ್ಷಾಂತ್ಯಕ್ಕೆ ಪಂಚಾಯ್ತಿ ಚುನಾವಣೆ ಖಚಿತ

ಅವಧಿ ಮುಗಿದಿರುವ ಎಲ್ಲಾ ಪಂಚಾಯ್ತಿಗಳಿಗೆ ಚುನಾವಣೆ ನಡೆಸಲು ಇಲಾಖೆ ಈಗಾಗಲೇ ಕ್ರಮ ಕೈಗೊಂಡಿದ್ದು, ಈ ವರ್ಷಾಂತ್ಯದೊಳಗೆ ಪಂಚಾಯ್ತಿ ಚುನಾವಣೆಗಳು ನಡೆಯಲಿವೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಜಲಜೀವನ್ ಕಾಮಗಾರಿ ವಿಳಂಬಕ್ಕೆ ಎಚ್ಚರಿಕೆ

ಜಲಜೀವನ್ ಅಭಿಯಾನದಡಿ ಕೊಳವೆ ಅಳವಡಿಸಲು ಅಗೆದಿರುವ ರಸ್ತೆಗಳನ್ನು ಮರು ಅಭಿವೃದ್ಧಿಪಡಿಸದೆ ಇರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡುವುದಾಗಿ ತಿಳಿಸಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ರಸ್ತೆ ದುರಸ್ತಿ, ಹರ್ ಘರ್ ಜಲ್ ಯೋಜನೆಯ ಪ್ರಗತಿ ಹಾಗೂ ಪ್ರಮಾಣಪತ್ರಗಳ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ

ಜಲಜೀವನ್ ಮಿಷನ್, ರಸ್ತೆ ಅಭಿವೃದ್ಧಿ ಸೇರಿದಂತೆ ಯಾವುದೇ ಕಾಮಗಾರಿಯಲ್ಲಿ ವಿಳಂಬವಾದರೆ ಸಂಬಂಧಿಸಿದ ಗುತ್ತಿಗೆದಾರರಿಗೆ ನೋಟಿಸ್ ನೀಡಿ, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕುಡಿಯುವ ನೀರಿನ ಗುಣಮಟ್ಟಕ್ಕೆ ಆದ್ಯತೆ

ನೀರಿನ ಮೂಲಗಳು ಮತ್ತು ಕೊಳವೆ ಮಾರ್ಗಗಳಲ್ಲಿ ಕಲುಷಿತ ನೀರು ಸೋರಿಕೆಯಾಗದಂತೆ ಕಟ್ಟೆಚ್ಚರ ವಹಿಸಲು ಹಾಗೂ ಸೋರಿಕೆ ಕಂಡುಬಂದರೆ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.

ಕೊಳವೆ ಬಾವಿಗಳಿಂದ ಪೂರೈಸುವ ನೀರಿನ ಗುಣಮಟ್ಟ ಪರೀಕ್ಷಿಸಿ, ಫ್ಲೋರೈಡ್ ಸೇರಿದಂತೆ ಅಪಾಯಕಾರಿ ಅಂಶಗಳಿದ್ದರೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular