ಮಹಿಳಾ ಟಿ20 ಏಷ್ಯಾಕಪ್ 2026ರ ಪಂದ್ಯದಲ್ಲಿ ಭಾರತದ ವಿರುದ್ಧ ಭಾರಿ ಮುಖಭಂಗ ಅನುಭವಿಸಿದ ಬೆನ್ನಲ್ಲೇ, ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯಕ್ಕೂ ಮುನ್ನ, ಭಾರತವನ್ನು ಸೋಲಿಸಿದ ನಂತರ ಹೇಗೆ ಸಂಭ್ರಮಿಸಬೇಕು ಎಂದು ಪಾಕ್ ಆಟಗಾರ್ತಿಯರು ಅಭ್ಯಾಸ ಮಾಡುತ್ತಿದ್ದ ವಿಡಿಯೋ ಇದಾಗಿದೆ.
ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ ತಮ್ಮ ಆಟಗಾರ್ತಿಯರಿಗೆ ಗೆಲುವಿನ ಸಂಭ್ರಮಾಚರಣೆ ಮತ್ತು ಡ್ಯಾನ್ಸ್ ಹಂತಗಳನ್ನು ಅಭ್ಯಾಸ ಮಾಡಿಸುತ್ತಿರುವುದು ಈ ವಿಡಿಯೋದಲ್ಲಿದೆ. ಆದರೆ ಮೈದಾನದಲ್ಲಿ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿ ಆಲೌಟ್ ಆದ ಕಾರಣ, ಈ ವಿಡಿಯೋ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಆಗುತ್ತಿದೆ.
ನೆಟ್ಟಿಗರ ತೀವ್ರ ಕಾಲೆಳೆತ
ಪಂದ್ಯದಲ್ಲಿ ಕ್ರಿಕೆಟ್ ಅಭ್ಯಾಸ ಮಾಡುವ ಬದಲು ವಿಕ್ಟರಿ ಡ್ಯಾನ್ಸ್ ಅಭ್ಯಾಸ ಮಾಡಿದ್ದಕ್ಕೆ ನೆಟ್ಟಿಗರು ತರೇವಾರಿ ಕಮೆಂಟ್ ಮೂಲಕ ಕಾಲೆಳೆದಿದ್ದಾರೆ. ಬ್ಯಾಟಿಂಗ್ ಅಭ್ಯಾಸ ಮಾಡಿದ್ದರೆ 55 ರನ್‌ಗೆ ಆಲೌಟ್ ಆಗುತ್ತಿರಲಿಲ್ಲ, ಮೈದಾನಕ್ಕಿಳಿಯುವ ಮುನ್ನವೇ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಸರಿಯಾದ ಪಾಠವಾಗಿದೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಸೋಲುವ ಮುನ್ಸೂಚನೆ ಇದ್ದ ಮೇಲೆಯೂ ಇಂತಹ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದೇಕೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಪಾಕಿಸ್ತಾನ ತಂಡವು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಗೆಲ್ಲುತ್ತದೆ ಎಂದು ಹಲವರು ಲೇವಡಿ ಮಾಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಭಾರತದ ಸ್ಪಿನ್ ದಾಳಿಗೆ ತಡಬಡಾಯಿಸಿತು. ಕೇವಲ 18.1 ಓವರ್‌ಗಳಲ್ಲಿ 55 ರನ್‌ಗಳಿಗೆ ಸರ್ವಪತನ ಕಂಡಿತು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನ ತಂಡದ ಅತ್ಯಂತ ಕನಿಷ್ಠ ಮೊತ್ತವಾಗಿದೆ. ಭಾರತದ ಪರ ಶ್ರೀ ಚರಣಿ ಮತ್ತು ಪ್ರೇಮಾ ರಾವತ್ ತಲಾ 3 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 2 ವಿಕೆಟ್ ಕಬಳಿಸಿ ಮಿಂಚಿದರು.
ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡವು ಇನ್ನು 68 ಎಸೆತಗಳು ಬಾಕಿ ಇರುವಂತೆಯೇ ಕೇವಲ 8.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 57 ರನ್ ಗಳಿಸಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ 18 ರನ್ ಗಳಿಸಿ ಗೆಲುವಿನ ದಂಡಯಾತ್ರೆ ಮುಗಿಸಿದರು. ಈ ಗೆಲುವಿನೊಂದಿಗೆ ಭಾರತ ತಂಡವು ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ಮೇಲುಗೈಯನ್ನು ಮುಂದುವರಿಸಿದೆ.

