ಧುರಂಧರ್ ಸಿನಿಮಾಗಳ ಸರಣಿ ಯಶಸ್ಸಿನ ನಂತರ ಬಾಲಿವುಡ್ ನಟ ರಣವೀರ್ ಸಿಂಗ್ ತಮ್ಮ ಮುಂಬರುವ ಬಿಗ್ ಬಜೆಟ್ ಸಿನಿಮಾ ‘ಪ್ರಳಯ್’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ಕಲ್ಯಾಣಿ ಪ್ರಿಯದರ್ಶನ್ ಕೂಡ ಅಭಿನಯಿಸುತ್ತಿರುವ ಈ ಸಿನಿಮಾದ ಸೆಟ್‌ನಿಂದ ವಿಡಿಯೋ ಒಂದಷ್ಟು ಲೀಕ್ ಆಗಿದ್ದು, ಜಾಲತಾಣಗಳಲ್ಲಿ ಭಾರಿ ಹಲ್‌ಚಲ್ ಸೃಷ್ಟಿಸಿದೆ.
ಸಾಲಿನಲ್ಲಿದ್ದ ವಿಡಿಯೋದಲ್ಲಿ ರಣವೀರ್ ಸಿಂಗ್, ತಮ್ಮ ಹಿಂದಿನ ಧುರಂಧರ್ ಚಿತ್ರದ ಹಂಝ ಪಾತ್ರದಂತೆಯೇ ಉದ್ದನೆಯ ಕೂದಲಿನ ಲುಕ್‌ನಲ್ಲಿ ಕಂಗೊಳಿಸುತ್ತಿದ್ದಾರೆ. ಅವರು ಮಗುವೊಂದನ್ನು ಬೆನ್ನಿನ ಮೇಲೆ ಹೊತ್ತು ಸಾಗುತ್ತಿದ್ದರೆ, ಪಕ್ಕದಲ್ಲೇ ಕಲ್ಯಾಣಿ ಪ್ರಿಯದರ್ಶನ್ ಹೆಜ್ಜೆ ಹಾಕುತ್ತಿದ್ದಾರೆ. ಜೊತೆಗೆ ನೆಲದ ಮೇಲೆ ಜೋಂಬಿಗಳು ಬಿದ್ದಿರುವಂತೆ ಮತ್ತು ರಣವೀರ್ ಆಕ್ಷನ್ ಪೋಸ್‌ನಲ್ಲಿರುವ ಕೆಲವು ಫೋಟೋಗಳು ಕೂಡ ವೈರಲ್ ಆಗಿವೆ.
ಅಭಿಮಾನಿಗಳ ಕುತೂಹಲ ಹೆಚ್ಚಿಸಿದ ಲೀಕ್ ವಿಡಿಯೋ
ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ರಣವೀರ್ ಸಿಂಗ್ ಅಭಿಮಾನಿಗಳು ಭಾರಿ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಹಂಝ ಪಾತ್ರದ ಕೂದಲಿನ ಶೈಲಿಯನ್ನೇ ಕಾಯ್ದುಕೊಂಡಿದ್ದರೂ, ಈ ಚಿತ್ರದಲ್ಲಿ ರಣವೀರ್ ಬಾಡಿ ಲಾಂಗ್ವೇಜ್ ಸಂಪೂರ್ಣ ವಿಭಿನ್ನವಾಗಿದೆ ಎಂದು ನೆಟ್ಟಿಗರು ಕೊಂಡಾಡಿದ್ದಾರೆ. ಈ ಸಿನಿಮಾ ವಿಶ್ವಪ್ರಸಿದ್ಧ ‘ದಿ ವಾಕಿಂಗ್ ಡೆಡ್’ ಅಥವಾ ‘ದಿ ಲಾಸ್ಟ್ ಆಫ್ ಅಸ್’ ಸರಣಿಯ ಮಾದರಿಯಲ್ಲಿ ಮೂಡಿಬರುತ್ತಿದೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.
300 ಕೋಟಿ ಬಜೆಟ್‌ನ ಜೋಂಬಿ ಸಿನಿಮಾ
ಪ್ರಳಯ್ ಚಿತ್ರವನ್ನು ಭಾರಿ ಬಜೆಟ್‌ನಲ್ಲಿ ಜೋಂಬಿ ಕಥಾಹಂದರವನ್ನು ಇಟ್ಟುಕೊಂಡು ನಿರ್ಮಿಸಲಾಗುತ್ತಿದೆ. ಹಂಸಲ್ ಮೆಹ್ತಾ ಅವರ ಟ್ರೂ ಸ್ಟೋರಿ ಫಿಲ್ಮ್ಸ್ ಮತ್ತು ರಣವೀರ್ ಸಿಂಗ್ ಅವರ ಮಾ ಕಸಮ್ ಫಿಲ್ಮ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಜೈ ಮೆಹ್ತಾ ನಿರ್ದೇಶನ ಮಾಡುತ್ತಿದ್ದಾರೆ. ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಬಾಲಿವುಡ್‌ನ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಲಿದೆ.
ಈ ಹಿಂದೆ ಈ ಚಿತ್ರವು ಜೋಸ್ ಸಾರಾಮಾಗೊ ಅವರ ‘ಬ್ಲೈಂಡ್‌ನೆಸ್’ ಕಾದಂಬರಿಯನ್ನು ಆಧರಿಸಿದೆ ಎಂಬ ವದಂತಿಗಳಿದ್ದವು. ಆದರೆ ನಿರ್ಮಾಪಕ ಹಂಸಲ್ ಮೆಹ್ತಾ ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದು, ಇದು ಸಂಪೂರ್ಣವಾಗಿ ಸ್ವತಂತ್ರ ಮತ್ತು ಹೊಸ ಕಥೆಯಾಗಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಚಿತ್ರೀಕರಣ ಹಂತದಲ್ಲಿರುವ ಈ ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.

