ಜಪಾನ್‌ನ ಮೃಗಾಲಯವೊಂದರಲ್ಲಿರುವ ಪುಟ್ಟ ಮರಿ ಕೋತಿ ‘ಪಂಚ್-ಕುನ್’ ಈಗ ಜಗತ್ತಿನಾದ್ಯಂತ ಲಕ್ಷಾಂತರ ಜನರ ಹೃದಯ ಗೆದ್ದಿದೆ. ಅಮ್ಮನಿಂದ ಕೈಬಿಡಲ್ಪಟ್ಟು, ಒಂಟಿತನ ಮತ್ತು ನೋವಿನ ನಡುವೆ ಬೆಳೆದ ಈ ಪುಟಾಣಿ ಜಪಾನೀಸ್ ಮೆಕಾಕ್ ಕೋತಿ, ಈಗ ಪ್ರವಾಸಿಗರಿಗೆ ಕೈಬೀಸಿ ‘ಬೈ-ಬೈ’ ಹೇಳುವ ಮೂಲಕ ಮತ್ತೆ ಸುದ್ದಿಯಾಗಿದೆ.
ಜುಲೈ 2025 ರಲ್ಲಿ ಜನಿಸಿದ ಪಂಚ್‌ನ ಆರಂಭಿಕ ದಿನಗಳು ಬಹಳ ಕಷ್ಟಕರವಾಗಿದ್ದವು. ತಾಯಿ ಮರಿ ಕೋತಿಯನ್ನು ಬಿಟ್ಟುಹೋದ ನಂತರ, ಮೃಗಾಲಯದ ಸಿಬ್ಬಂದಿ ಅದನ್ನು ಸಾಕಿ ಬೆಳೆಸಿದರು. ಇತರ ದೊಡ್ಡ ಕೋತಿಗಳಿಂದ ಕಿರುಕುಳ ಅನುಭವಿಸುತ್ತಿದ್ದ ಪಂಚ್, ರಾತ್ರಿಯ ವೇಳೆ ತನ್ನ ಆಟದ ಗೊಂಬೆಯನ್ನು (ಟೆಡ್ಡಿ ಬೇರ್) ಅಪ್ಪಿಕೊಂಡು ಅಳುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದನ್ನು ಕಂಡು ಸಾವಿರಾರು ಜನರು ಮಮ್ಮಲ ಮರುಗಿದ್ದರು. ತನ್ನ ಪ್ರಾಣ ಸ್ನೇಹಿತನಂತಿರುವ ಈ ಗೊಂಬೆಯನ್ನೇ ಸದಾ ಜೊತೆಯಲ್ಲಿಟ್ಟುಕೊಂಡು ಓಡಾಡುವ ಪಂಚ್‌ನ ವಿಡಿಯೋ ಫೆಬ್ರವರಿಯಲ್ಲಿ ಭಾರೀ ಸಂಚಲನ ಮೂಡಿಸಿತ್ತು.
ಟೋಕಿಯೋ ಸಮೀಪದ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ ಈ ಮರಿ ಕೋತಿಯನ್ನು ನೋಡಲು ಈಗ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಮರಿ ಕೋತಿಯ ಆರೋಗ್ಯದ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಮೃಗಾಲಯದ ಅಧಿಕಾರಿಗಳು, ಪಂಚ್ ಈಗ ಸಂಪೂರ್ಣ ಆರೋಗ್ಯವಾಗಿದೆ ಮತ್ತು ಇತರ ಕೋತಿಗಳೊಂದಿಗೆ ಬೆರೆಯಲು ಕಲಿಯುತ್ತಿದೆ ಎಂದು ತಿಳಿಸಿದ್ದಾರೆ. ಚಳಿಗಾಲದಲ್ಲಿ ಕೋತಿಗಳು ಬೆಚ್ಚಗಿರಲು ಪರಸ್ಪರ ಅಪ್ಪಿಕೊಳ್ಳುವುದರಿಂದ ಕೆಲವೊಮ್ಮೆ ಕೂದಲು ಉದುರುವಿಕೆ ಕಂಡುಬರುತ್ತದೆ, ಆದರೆ ಅದಕ್ಕೆ ಯಾವುದೇ ಕಾಯಿಲೆ ಕಾರಣವಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಮೃಗಾಲಯದ ಸಿಬ್ಬಂದಿ ಪಂಚ್‌ಗಾಗಿ ವಿಶೇಷ ಕಾಳಜಿ ವಹಿಸುತ್ತಿದ್ದು, ಅದು ಆಟವಾಡಲು ಅನುಕೂಲವಾಗುವಂತೆ ಮರಗಳು ಮತ್ತು ರಹಸ್ಯ ಕೊಠಡಿಗಳ ವ್ಯವಸ್ಥೆ ಮಾಡಿದ್ದಾರೆ. ಕಷ್ಟದ ದಿನಗಳನ್ನು ದಾಟಿ ಬಂದ ಈ ಮುದ್ದಾದ ಜೀವ ಈಗ ನೆಟ್ಟಿಗರ ಪಾಲಿನ ‘ರಿಯಲ್ ಹೀರೋ’ ಆಗಿದೆ.

