ಬೆಂಗಳೂರು: ಜನಗಣತಿಯ ಕರ್ತವ್ಯದಿಂದ ಮೌಲ್ಯಮಾಪನಕ್ಕೆ ನಿಯೋಜನೆಗೊಂಡ ಶಿಕ್ಷಕರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಅನ್ವಯಿಸಿ ಆದೇಶಿಸಲಾಗಿದೆ. ಜಿಬಿಎ ಮುಖ್ಯ ಆಯುಕ್ತರ ಅನುಮೋದನೆ ಮೇರೆಗೆ ವಿನಾಯಿತಿ ನೀಡಲಾಗಿದೆ.
ಈ ಮೂಲಕ ರಾಷ್ಟ್ರೀಯ ಜನಗಣತಿ ಕಾರ್ಯಗಳಿಗೆ ಶಿಕ್ಷಣ ಇಲಾಖೆ ಸಿಬ್ಬಂದಿ ನಿಯೋಜಿಸುವ ಕುರಿತಂತೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಶಿಕ್ಷಣ ಇಲಾಖೆಯ ಕೆಲಸ ಕಾರ್ಯಗಳ ಹಿತದೃಷ್ಟಿಯಿಂದ ಉಪನ್ಯಾಸಕರು, ಶಿಕ್ಷಕರು ಮತ್ತು ಪರೀಕ್ಷಾ ಮಂಡಳಿ ಸಿಬ್ಬಂದಿಗೆ ಜನಗಣತಿ ಕರ್ತವ್ಯಗಳಿಂದ ವಿನಾಯಿತಿ ನೀಡಲು ಅನುಮೋದನೆ ದೊರೆತಿದೆ.
ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಗ್ರೂಪ್ ಬಿ, ಗ್ರೂಪ್ ಸಿ ವರ್ಗದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಜನಗಣತಿ ಕಾರ್ಯಗಳಿಗೆ ನಿಯೋಜಿಸುವ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಪರೀಕ್ಷಾ ಮೌಲ್ಯಮಾಪನ, ಶೈಕ್ಷಣಿಕ ಚಟುವಟಿಕೆಗಳಿಗೆ ವ್ಯತ್ಯಯ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ಏಪ್ರಿಲ್ 4ರಂದು ಪ್ರಸ್ತಾವನೆ ಸಲ್ಲಿಸಿ, ಶಿಕ್ಷಕರು ಮತ್ತು ಉಪನ್ಯಾಸಕರು ಸೇರಿದಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿಬ್ಬಂದಿಗೆ ವಿನಾಯಿತಿ ನೀಡಲು ಮನವಿ ಮಾಡಿದ್ದರು.
ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಏಪ್ರಿಲ್ 9ರಂದು ಮುಖ್ಯ ಆಯುಕ್ತರು ಅನುಮತಿ ನೀಡಿದ್ದಾರೆ. ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಎಲ್ಲಾ ವಲಯಗಳಿಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ಉತ್ತರ ನಗರ ಪಾಲಿಕೆಗಳ ಆಯುಕ್ತರಿಗೆ ಈ ಬಗ್ಗೆ ನಿರ್ದೇಶಿಸಲಾಗಿದೆ.

