ತುಮಕೂರು: ಒಪಿಎಸ್ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದ್ದು, ಶೀಘ್ರವೇ ಆದೇಶ ಹೊರಡಿಸಲಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ತುಮಕೂರಿನಲ್ಲಿ ಆಯೋಜಿಸಿದ್ದ ಭಾರತರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 139ನೇ ಜನ್ಮ ದಿನಾಚರಣೆ ಹಾಗೂ ಪ್ರಶಸ್ತಿ ವಿಜೇತ ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಕ್ಷದ ಪ್ರಣಾಳಿಕೆ ಬರೆಯುವ ಸಂದರ್ಭದಲ್ಲಿ ಒಪಿಎಸ್ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದರು. ಅದನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದೆ. ಒಪಿಎಸ್ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಕೆಲವೇ ದಿನಗಳಲ್ಲಿ ಆದೇಶ ಹೊರಡಿಸಲಾಗುವುದು. ಆರ್ಥಿಕ ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ಕೂಡ ಈ ತೀರ್ಮಾನವನ್ನು ನಿಮಗಾಗಿ ತೆಗೆದುಕೊಂಡಿದ್ದೇವೆ ಎಂದರು.
ಭಾರತದಲ್ಲಿ ಬಹಳ ಪೂರ್ವದಲ್ಲಿ ಅನೇಕ ಮಹರ್ಷಿಗಳು ಗುರುವಿನ ಸ್ಥಾನ ಅಲಂಕರಿಸಿದ್ದರು. ಭಾರತದಂತೆ ಪ್ರಪಂಚದ ಯಾವುದೇ ರಾಷ್ಟ್ರದಲ್ಲಿ ಗುರುವಿಗೆ ಗೌರವಿಸಿರುವ ಉದಾಹರಣೆಗಳನ್ನು ನೋಡಲು ಸಾಧ್ಯವಿಲ್ಲ. ನಮ್ಮದು ಇಂತಹ ಉದಾತ್ತ ಆದರ್ಶಗಳನ್ನು ಹೊಂದಿರುವ ಸಮಾಜ. ಪ್ರತಿಯೊಬ್ಬರ ಬದುಕಿನಲ್ಲೂ ಕೂಡ ಒಬ್ಬ ಗುರುವಿದ್ದಾನೆ. ಆ ಗುರುವಿನಿಂದ ಕಲಿತ ಅನೇಕ ವಿಚಾರಗಳು ಅವರ ಬದುಕಿನ ಮೇಲೆ ಪ್ರಭಾವ ಬೀರುತ್ತದೆ ಎಂದರು.
ನಾನು ಗೊಲ್ಲಹಳ್ಳಿಯಲ್ಲಿ ಓದುವಾಗ ರಾಮಣ್ಣ ಎಂಬ ಕನ್ನಡ ಮೇಷ್ಟ್ರು ಇದ್ದರು. ಅವರು ಕನ್ನಡ ಪಾಠವನ್ನಷ್ಟೇ ಮಾಡಿದ್ದರೆ ಅವರನ್ನು ಓರ್ವ ಸಾಮಾನ್ಯ ಶಿಕ್ಷಕರಾಗಿ ಸೀಮಿತ ಮಾಡಬಹುದಿತ್ತು. ಅದರೆ, ಅವರು ಕಲಿಸಿದ ಅನೇಕ ವಿಚಾರಗಳನ್ನು, ಜೀವನ ಪಾಠವನ್ನು ನಾನು ನಿತ್ಯ ಸ್ಮರಿಸುತ್ತೇನೆ. ಎರಡನೇಯವರು ವಿಶ್ವವಿದ್ಯಾಲಯದಲ್ಲಿ ಓದುವಾಗ ಗುರುಗಳಾಗಿದ್ದ ಕೃಷ್ಣಶಾಸ್ತ್ರಿ ಅವರು. ಒಂದು ವೇಳೆ ಇವರು ನನ್ನನ್ನು ತಿದ್ದದೆ ಹೋಗಿದ್ದರೆ, ಈ ಸ್ಥಾನದಲ್ಲಿ ನಾನು ಇರುತ್ತಿರಲಿಲ್ಲ. ನನ್ನ ಜೀವನ ಪಯಣದ ಶ್ರೇಯವನ್ನು ಅವರಿಗೆ ಮುಡಿಪಾಗಿಟ್ಟಿದ್ದೇನೆ ಎಂದು ಹೇಳಿದ್ದಾರೆ.
ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮಗೆ ತಿಳಿದ ವಿಚಾರಧಾರೆಗಳನ್ನು ಪ್ರಪಂಚದ ಮುಂದೆ ಇಟ್ಟರು. ಅಂತಾರಾಷ್ಡ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿಚಾರವಂತರು, ತಿಳಿದಂತವರು ರಾಧಾಕೃಷ್ಣನ್ ಅವರನ್ನು ಕೊಂಡಾಡುವುದನ್ನು ನೋಡಿದರೆ ಸಮಾಜಕ್ಕೆ ಅವರ ಕೊಡುಗೆ ಎಷ್ಟು ಎಂಬುದು ಗೊತ್ತಾಗುತ್ತದೆ ಎಂದರು.
ಪ್ರತಿಯೊಬ್ಬ ಶಿಕ್ಷಕನು ಕೂಡ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಪಾಲಿಸಬೇಕು. ತನ್ನ ವಿದ್ಯಾರ್ಥಿಗೆ ಜೀವನದ ಮೌಲ್ಯಗಳನ್ನು ಅರ್ಥೈಸಬೇಕು, ಬದುಕಿನ ದಾರಿ ಮತ್ತು ಆತನೊಳಗಿನ ಸಾಮರ್ಥ್ಯವನ್ನು ತೋರಿಸುವುದು ಬಹಳ ಮುಖ್ಯ. ಅದಕ್ಕಾಗಿ ಶಿಕ್ಷಕರಿಗೆ ಗುರುವಿನ, ದೇವರ ಸ್ಥಾನ ಕೊಟ್ಟಿದ್ದಾರೆ ಎಂದರು.
ಆಧುನಿಕ ಜಗತ್ತಿನಲ್ಲಿ ಜ್ಯೋತಿಬಾ ಫುಲೆ ಅವರಿಂದ ಹಿಡಿದು ಲಕ್ಷಾಂತರ ಶಿಕ್ಷಕರು ದೇಶವನ್ನು ಕಟ್ಟಿದ್ದಾರೆ. ಭಾರತ ಬಲಿಷ್ಠ ಭಾರತವಾಗಿ ತಯಾರಾಗುತ್ತಿದ್ದರೆ ಅದಕ್ಕೆ ಶಿಕ್ಷಕರು ಕಾರಣ. ಶಿಕ್ಷಕರು ಹಾಕಿಕೊಟ್ಟ ದಾರಿಯಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ವಿಯಾಗಿರುವುದರಿಂದ ಭಾರತ ಈ ಸ್ಥಾನದಲ್ಲಿ ನಿಂತಿದೆ ಎಂದರು.
19 ಲಕ್ಷ ಇಂಜಿನಿಯರ್‌ಗಳು, 10 ಲಕ್ಷ ವೈದ್ಯರನ್ನು ಭಾರತ ಉತ್ಪಾದಿಸುತ್ತಿದೆ. ಯಶಸ್ವಿ ಪದವೀಧರನ ಹಿಂದೆ ಹತ್ತಾರು ಗುರುಗಳು ನಿಂತಿದ್ದಾರೆ. ಭಾರತ ಇಷ್ಟೊಂದು ಬಲಿಷ್ಠವಾಗಿ ಬೆಳೆಯುತ್ತಿರುವುದಕ್ಕೆ ಮೂಲ ಕಾರಣ ಶಿಕ್ಷಕರು ಎಂದು ಹೇಳಿದ್ದಾರೆ.
ಅನೇಕ ತೀರ್ಮಾನಗಳನ್ನು ಶಿಕ್ಷಕರಿಗಾಗಿ ತೆಗೆದುಕೊಂಡಿದ್ದೇವೆ. ಶಿಕ್ಷಕರ ನೇಮಕಾತಿ ಪ್ರಾರಂಭಿಸಿದ್ದೇವೆ. 15,000 ಸಾವಿರ ನೇಮಕಾತಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಸಹ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನೀವೆಲ್ಲಾ ಪ್ರಜ್ಞಾವಂತರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಸಮಾಜಕ್ಕೆ ಬಹಳ ಮುಖ್ಯ. ಯುವಕರ ಆಸೆ, ಆಕಾಂಕ್ಷೆಗಳು ಬದಲಾಗಿವೆ. ಯುವಕರು ದಾರಿ ತಪ್ಪದೇ ದೇಶದ ಅಭಿವೃದ್ಧಿಗೆ ತೊಡಗಿಸಿಕೊಳ್ಳುವ ಕೆಲಸ ಆಗಬೇಕು. ಯಶಸ್ಸಿಗಾಗಿ ನಾವು ಕವಲುದಾರಿ ಹಿಡಿಯುವಂತೆ ಮಾರ್ಗದರ್ಶನ ಮಾಡಬಾರದು, ಅದರಿಂದ ಯುವಕರು ದಾರಿ ತಪ್ಪುತ್ತಾರೆ. ಜನರ ಸೇವೆ ಮಾಡುವುದೇ ನಮ್ಮ ಕರ್ತವ್ಯ. ಇದಕ್ಕಾಗಿಯೇ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ, ಈ ವಿಚಾರದಲ್ಲಿ ನಾವು ಬದ್ಧರಾಗಿ ಮುಂದುವರೆಯುತ್ತೇವೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

