ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಇಂದಿರಾನಗರದ ಚಿನ್ಮಯ್ ಮಿಷನ್ ಆಸ್ಪತ್ರೆಯಲ್ಲಿ ನರ್ಸ್ ಒಬ್ಬರ ಬೇಜವಾಬ್ದಾರಿತನಕ್ಕೆ 6 ತಿಂಗಳ ಕಂದಮ್ಮ ಬಲಿಯಾಗಿದೆ. ಜ್ವರಕ್ಕಾಗಿ ದಾಖಲಾಗಿದ್ದ ಮಗುವಿನ ಬ್ಯಾಂಡೇಜ್ ತೆಗೆಯುವಾಗ ನರ್ಸ್ ಮಗುವಿನ ಕೈ ಬೆರಳನ್ನೇ ಕತ್ತರಿಸಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಜ್ವರದಿಂದ ಬಳಲುತ್ತಿದ್ದ ಮಗುವನ್ನು ಫೆಬ್ರವರಿ 19 ರಂದು ಪೋಷಕರು ಚಿನ್ಮಯ್ ಮಿಷನ್ ಆಸ್ಪತ್ರೆಗೆ ದಾಖಲಿಸಿದ್ದರು.ಚಿಕಿತ್ಸೆಗಾಗಿ ವೈದ್ಯರು ಮಗುವಿನ ಕೈಗೆ ಡ್ರಿಪ್ ಹಾಕಿ ಬ್ಯಾಂಡೇಜ್ ಸುತ್ತಿರುವರು. ಮಗುವನ್ನು ಡಿಸ್ಚಾರ್ಜ್ ಮಾಡುವ ಸಮಯದಲ್ಲಿ ಬ್ಯಾಂಡೇಜ್ ತೆಗೆಯುವಾಗ ನರ್ಸ್ ಅನಿತಾ ಎಂಬುವವರು ಕತ್ತರಿಯಿಂದ ಮಗುವಿನ ಕಿರುಬೆರಳನ್ನೇ ಕತ್ತರಿಸಿದ್ದಾರೆ.
ಪೋಷಕರ ಆಕ್ರೋಶ: ಮಗುವಿನ ಕಿರುಚಾಟ ಕೇಳಿ ಪೋಷಕರು ದೌಡಾಯಿಸಿದಾಗ ಮಗುವಿನ ಬೆರಳಿನಲ್ಲಿ ರಕ್ತ ಬರಲು ಶುರುವಾಗಿದೆ. ಆಸ್ಪತ್ರೆ ಸಿಬ್ಬಂದಿಯ ಈ ಭೀಕರ ನಿರ್ಲಕ್ಷ್ಯದ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ದೂರು : ಘಟನೆಗೆ ಸಂಬಂಧಿಸಿದಂತೆ ಮಗುವಿನ ಪೋಷಕರು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ನರ್ಸ್ ಅನಿತಾ ವಿರುದ್ಧ ಎಫ್ಐಆರ್ (FIR) ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಜ್ವರ ಗುಣಪಡಿಸಲು ಆಸ್ಪತ್ರೆಗೆ ಬಂದ ಮಗು ಈಗ ಬೆರಳನ್ನೇ ಕಳೆದುಕೊಳ್ಳುವಂತಾಗಿರುವುದು ಆಸ್ಪತ್ರೆಯ ವೈದ್ಯಕೀಯ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.

