HomeKarnatakaಕಿರುಕುಳ ನೀಡಿದ ಕಿರಾತಕನ ವಿರುದ್ಧ ದೂರು ನೀಡಿದ್ದಕ್ಕೆ ನರ್ಸ್ ಗೆ ಕೊಲೆ ಬೆದರಿಕೆ

ಕಿರುಕುಳ ನೀಡಿದ ಕಿರಾತಕನ ವಿರುದ್ಧ ದೂರು ನೀಡಿದ್ದಕ್ಕೆ ನರ್ಸ್ ಗೆ ಕೊಲೆ ಬೆದರಿಕೆ

ಮಂಗಳೂರು: ತನ್ನ ಮೇಲೆ ದೌರ್ಜನ್ಯವೆಸಗಿದವನ ವಿರುದ್ಧ ನರ್ಸ್ ಓರ್ವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಕ್ಕೆ ಆರೋಪಿ ಆಕೆಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ.

ಅಷ್ಟೇ ಅಲ್ಲದೆ ಆರೋಪಿ ಯುವತಿಯ ಸ್ನೇಹಿತೆಯರ ಮೇಲೂ ಹಲ್ಲೆ ನಡೆಸಿದ್ದಾನೆ. ಇದೆಲ್ಲದರ ಬಳಿಕವೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಪುತ್ತೂರು ಮೂಲದ ನರ್ಸ್ ನಂದಿನಿ ಎಂಬುವವರು ಮಂಗಳೂರಿನ ನೀರುಮಾರ್ಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಳೆದ ಆಗಸ್ಟ್ 16ರಂದು ನಂದಿನಿ ಮೈಸೂರಿಗೆ ತೆರಳುವಾಗ, ತಮ್ಮ ಮನೆಯಲ್ಲಿದ್ದ ನಾಯಿಗೆ ಊಟ ಹಾಕಲು ಕೀಯನ್ನು ಸ್ನೇಹಿತೆ ಚಂದನಾಗೆ ನೀಡಿದ್ದರು. ಆಗಸ್ಟ್ 17ರಂದು ಚಂದನಾ ತನ್ನ ಮತ್ತೊಬ್ಬ ಸ್ನೇಹಿತೆ, ಕೇರಳ ಮೂಲದ ನರ್ಸ್ ಆದಿತ್ಯಾ ಜೊತೆ ನಂದಿನಿ ಮನೆಗೆ ತೆರಳಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆ, ಆದಿತ್ಯಾ ನೀಡಿದ ಮಾಹಿತಿ ಆಧರಿಸಿ ಅಲ್ಲಿಗೆ ಬಂದ ಆರೋಪಿ ನೌಶದ್, ಮನೆಗೆ ಅಕ್ರಮವಾಗಿ ಪ್ರವೇಶಿಸಿ ಚಂದನಾ ಮತ್ತು ಆದಿತ್ಯಾಗೆ ಅಶ್ಲೀಲವಾಗಿ ನಿಂದಿಸಿ ಗಲಾಟೆ ಮಾಡಿದ್ದಾನೆ. ಈ ವಿಷಯ ತಿಳಿದು ನಂದಿನಿ ಕರೆ ಮಾಡಿದಾಗ, ಫೋನ್ ಸ್ವೀಕರಿಸಿದ ನೌಶದ್ ನಂದಿನಿಗೂ ಅಶ್ಲೀಲವಾಗಿ ಬೈದು ಜೀವಬೆದರಿಕೆ ಹಾಕಿದ್ದಾನೆ.

ಆರೋಪಿ ನೌಶದ್ ವಿರುದ್ಧ ನಂದಿನಿ ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದರು. ದೂರು ನೀಡಿದ ವಿಚಾರ ತಿಳಿಯುತ್ತಿದ್ದಂತೆಯೇ ಕೋಪಗೊಂಡ ನೌಶದ್, ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿ “ನನಗೆ ಯಾವುದಕ್ಕೂ ಹೆದರಿಕೆ ಇಲ್ಲ. ಪೊಲೀಸರಿಗೆ ಶರಣಾಗೋದಕ್ಕಿಂತ ಮುಂಚೆ ನಿನ್ನ ತಲೆ ತೆಗೀತೀನಿ, ಕೊಲ್ಲದೇ ಬಿಡುವುದಿಲ್ಲ” ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದ. ಇದರಿಂದ ಆತಂಕದಲ್ಲಿರುವ ನಂದಿನಿ, ಆಗಸ್ಟ್ 20ರಂದು ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಳು.

ದೂರು ನೀಡಿ 10 ದಿನಗಳಾದರೂ ಪೊಲೀಸರು ಆರೋಪಿ ನೌಶದ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಭಯಗೊಂಡ ನಂದಿನಿ, ರಕ್ಷಣೆ ಕೋರಿ ವಿಶ್ವ ಹಿಂದೂ ಪರಿಷತ್ (VHP) ಮತ್ತು ದುರ್ಗಾವಾಹಿನಿ ಮುಖಂಡರನ್ನು ಸಂಪರ್ಕಿಸಿದ್ದಾಳೆ.

ಈ ವೇಳೆ ಮತ್ತೊಬ್ಬ ನರ್ಸ್ ಆದಿತ್ಯಾಳನ್ನೂ ವಿಎಚ್‌ಪಿ ಮುಖಂಡರು ಸಂಪರ್ಕಿಸಿದ್ದು, “ನೌಶದ್ ಬಳಿ ನನ್ನ ಫೋಟೋ, ವಿಡಿಯೋಗಳಿವೆ” ಎಂದು ಆದಿತ್ಯಾ ಹೇಳಿಕೊಂಡಿದ್ದಾಳೆ. ಈ ಆಧಾರದ ಮೇಲೆ ನೌಶದ್ ಆಕೆಯ ಫೋಟೋ-ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದನಾ ಎಂಬ ಅನುಮಾನ ವ್ಯಕ್ತವಾಗಿದೆ. ಸದ್ಯ ಆದಿತ್ಯಾ ಕೇರಳಕ್ಕೆ ತೆರಳಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.

ಇನ್ನೊಂದೆಡೆ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆಯೇ ಆಸ್ಪತ್ರೆ ಆಡಳಿತ ಮಂಡಳಿಯು ದೂರು ನೀಡಿದ ನಂದಿನಿ ಹಾಗೂ ಆದಿತ್ಯಾ ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಿ ಆದೇಶಿಸಿದೆ.

ಆರೋಪಿ ಬಂಧನ ವಿಳಂಬದ ಬಗ್ಗೆ ಸಾರ್ವಜನಿಕರು ಹಾಗೂ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ನಮಗೂ ಆರೋಪಿಯನ್ನು ಬಂಧಿಸುವ ಉದ್ದೇಶವೇ ಇದೆ. ಈ ಪ್ರಕರಣದಲ್ಲಿ ಯಾವುದೇ ವಿನಾಯಿತಿ ನೀಡಲಾಗಿಲ್ಲ. ಆದರೆ ಇದು ದೂರವಾಣಿ ಮೂಲಕ ಬೆದರಿಕೆ ಹಾಕಿದ ಪ್ರಕರಣವಾಗಿದೆ. ಕಾನೂನಿನಲ್ಲಿ ಈ ಅಪರಾಧಕ್ಕೆ ನಿಗದಿಪಡಿಸಿರುವ ಶಿಕ್ಷೆಯ ಮಿತಿ ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆಯಿರುವುದರಿಂದ ತಕ್ಷಣ ಬಂಧಿಸಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ ಎಂದು ಕಮಿಷನರ್ ತಿಳಿಸಿದ್ದಾರೆ. ಪೊಲೀಸ್ ಕಮಿಷನರ್‌ ಸ್ಪಷ್ಟನೆ ಬೆನ್ನಲ್ಲೇ, ಆರೋಪಿ ನೌಶದ್ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದಾನೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular