ಮಂಗಳೂರು: ಕಳೆದ ಒಂಬತ್ತು ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ಮಂಗಳೂರಿನ ನಟೋರಿಯಸ್ ರೌಡಿಶೀಟರ್ ಸಫ್ವಾನ್ ಹುಸೈನ್ (42) ನನ್ನು ಮಂಗಳೂರು ಸಿಸಿಬಿ (CCB) ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಆಂಧ್ರಪ್ರದೇಶದ ರಾಯಚೋಟಿ ಪಟ್ಟಣದಲ್ಲಿ ಈತನನ್ನು ಸುತ್ತುವರೆದು ಬಂಧಿಸಿದ್ದಾರೆ. ಎಸಿಪಿ ಮನೋಜ್ ಕುಮಾರ್ ಅವರ ನೇತೃತ್ವದ ತಂಡ ಈ ಕಾರ್ಯಾಚರಣೆಯನ್ನು ನಡೆಸಿದೆ.
ವಿದೇಶಕ್ಕೆ ಪರಾರಿ
ಈತ ಅಪಾಯಕಾರಿ ‘ಟಾರ್ಗೆಟ್ ಗ್ಯಾಂಗ್’ ನಲ್ಲಿ ಸಕ್ರಿಯ ಸದಸ್ಯನಾಗಿದ್ದ.ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ತನ್ನ ಹೆಸರನ್ನು ಉಮರ್ ಮೊಹಮ್ಮದ್ ನಾಸಿರ್ ಎಂದು ಬದಲಿಸಿಕೊಂಡಿದ್ದ.ಬದಲಾದ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 2018 ರಲ್ಲಿ ವಿದೇಶಕ್ಕೆ (ದುಬೈ) ಪರಾರಿಯಾಗಿದ್ದ.ಸುಮಾರು 9 ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಈತ, ಇತ್ತೀಚೆಗೆ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ವಿದೇಶದಿಂದ ಗುಟ್ಟಾಗಿ ಭಾರತಕ್ಕೆ ವಾಪಸ್ ಆಗಿದ್ದ.
ನಕಲಿ ಆಧಾರ್ ಕಾರ್ಡ್ ಪತ್ತೆ
ಬಂಧಿತ ರೌಡಿಯಿಂದ ಪೊಲೀಸರು ನಕಲಿ ಆಧಾರ್ ಕಾರ್ಡ್ ವಶಪಡಿಸಿಕೊಂಡಿದ್ದಾರೆ. ಇದೇ ನಕಲಿ ಗುರುತಿನ ಚೀಟಿಯನ್ನು ಬಳಸಿಕೊಂಡು ಆತ ಆಂಧ್ರಪ್ರದೇಶದಲ್ಲಿ ಯಾರಿಗೂ ಸಂಶಯ ಬರದಂತೆ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. ಬಂಧಿತ ಸಫ್ವಾನ್ ಹುಸೈನ್ ಮೇಲೆ ಮಂಗಳೂರು ಸೇರಿದಂತೆ ವಿವಿಧೆಡೆ ಒಟ್ಟು 31 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

