ನೀವು ಸಕ್ಕರೆ ಹೆಚ್ಚಿರುವ ಸಿಹಿತಿಂಡಿಗಳನ್ನು ಹೆಚ್ಚಾಗಿ ತಿನ್ನುತ್ತೀರಾ? ಅಥವಾ ಸಕ್ಕರೆ ಮಿಶ್ರಿತ ಪಾನೀಯಗಳನ್ನು ಕುಡಿಯುತ್ತೀರಾ? ಹಾಗಿದ್ದರೆ ಎಚ್ಚರ! ಮುಂದಿನ ದಿನಗಳಲ್ಲಿ ನೀವು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ. ಅದು ಕೇವಲ ಮಧುಮೇಹ (ಡಯಾಬಿಟಿಸ್) ಮಾತ್ರವಲ್ಲ, ಅದಕ್ಕಿಂತಲೂ ಅಪಾಯಕಾರಿ ಕಾಯಿಲೆಯ ಅಪಾಯವಿದೆ ಎಂದು ಹೊಸ ಅಧ್ಯಯನವೊಂದು ಎಚ್ಚರಿಕೆ ನೀಡಿದೆ.
ಅಮೆರಿಕನ್ ಅಕಾಡೆಮಿ ಆಫ್ ನ್ಯೂರಾಲಜಿ ಪ್ರಕಟಿಸಿರುವ ಅಧ್ಯಯನದ ಪ್ರಕಾರ, ಸಕ್ಕರೆ ಹಾಗೂ ಕಡಿಮೆ ಕ್ಯಾಲೊರಿಯ ಕೃತಕ ಸಿಹಿಕಾರಕಗಳನ್ನು (Artificial Sweeteners) ಹೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ಮೆದುಳಿನ ಕಾರ್ಯಕ್ಷಮತೆ ಕುಸಿಯುವ ಸಾಧ್ಯತೆ ಹೆಚ್ಚುತ್ತದೆ. ಇದರಿಂದ ನೆನಪಿನ ಶಕ್ತಿ, ಯೋಚನಾ ಸಾಮರ್ಥ್ಯ ಕುಗ್ಗಿ, ವಯಸ್ಸಾಗುವ ಮುನ್ನವೇ ಮರೆವಿನ ಕಾಯಿಲೆ (ಡಿಮೆನ್ಷಿಯಾ) ಬರುವ ಅಪಾಯ ಹೆಚ್ಚುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಸಾವೋ ಪೌಲೊ ವಿಶ್ವವಿದ್ಯಾಲಯದ ಸಂಶೋಧಕಿ ಡಾ. ಕ್ಲಾಡಿಯಾ ಕಿಮಿ ಸುಮೋಟೋ ಅವರ ಪ್ರಕಾರ, ಕಡಿಮೆ ಕ್ಯಾಲೊರಿ ಹೊಂದಿರುವ ಕೃತಕ ಸಿಹಿಕಾರಕಗಳನ್ನು ದೀರ್ಘಕಾಲ ಬಳಸುವುದರಿಂದ ಮೆದುಳಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
13 ಸಾವಿರಕ್ಕೂ ಹೆಚ್ಚು ಮಂದಿಯ ಅಧ್ಯಯನ
ಈ ಅಧ್ಯಯನದಲ್ಲಿ ಸುಮಾರು 13,000 ವಯಸ್ಕರ ಆರೋಗ್ಯ ಮಾಹಿತಿಯನ್ನು ವಿಶ್ಲೇಷಿಸಲಾಗಿದೆ. ಅಸ್ಪಾರ್ಟೇಮ್ (Aspartame), ಸ್ಯಾಕರಿನ್ (Saccharin), ಅಸೆಸಲ್ಫೇಮ್-ಕೆ (Acesulfame-K), ಎರಿಥ್ರಿಟಾಲ್ (Erythritol), ಜೈಲಿಟಾಲ್ (Xylitol), ಸೊರ್ಬಿಟಾಲ್ (Sorbitol) ಮತ್ತು ಟ್ಯಾಗಟೋಸ್ (Tagatose) ಸೇರಿದಂತೆ ಏಳು ವಿಧದ ಕಡಿಮೆ ಕ್ಯಾಲೊರಿಯ ಸಿಹಿಕಾರಕಗಳನ್ನು ಬಳಸುವವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.
ಅಧ್ಯಯನದ ಫಲಿತಾಂಶಗಳ ಪ್ರಕಾರ, ಹೆಚ್ಚು ಪ್ರಮಾಣದಲ್ಲಿ ಕೃತಕ ಸಿಹಿಕಾರಕಗಳನ್ನು ಸೇವಿಸಿದವರಲ್ಲಿ ಮೆದುಳಿನ ಕಾರ್ಯಕ್ಷಮತೆ ಕುಸಿಯುವ ವೇಗವು 62 ಶೇಕಡಾ ಹೆಚ್ಚಾಗಿರುವುದು ಕಂಡುಬಂದಿದೆ. ವಿಶೇಷವಾಗಿ ಮಧುಮೇಹ ಇರುವವರಲ್ಲಿ ಇದರ ಪರಿಣಾಮ ಇನ್ನಷ್ಟು ತೀವ್ರವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಇದೇ ವೇಳೆ, ಮಿತ ಪ್ರಮಾಣದಲ್ಲಿ ಕೃತಕ ಸಿಹಿಕಾರಕಗಳನ್ನು ಬಳಸಿದವರಲ್ಲೂ ಮೆದುಳಿನ ಕಾರ್ಯಕ್ಷಮತೆ ಕುಸಿಯುವ ಪ್ರಮಾಣ 35 ಶೇಕಡಾ ಇದ್ದುದಾಗಿ ಅಧ್ಯಯನ ತಿಳಿಸಿದೆ.
ಮಧುಮೇಹಿಗಳೂ ಎಚ್ಚರ !
ಮಧುಮೇಹ ಇರುವ ಅನೇಕರು ಸಾಮಾನ್ಯ ಸಕ್ಕರೆಯ ಬದಲಿಗೆ ಕಡಿಮೆ ಕ್ಯಾಲೊರಿಯ ಕೃತಕ ಸಿಹಿಕಾರಕಗಳನ್ನು ಹೆಚ್ಚು ಬಳಸುತ್ತಾರೆ. ಆದರೆ, ಇವು ವಯಸ್ಸಿನ ಸಂಬಂಧವಿಲ್ಲದೆ ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
ತಜ್ಞರ ಸಲಹೆಯಂತೆ, ಕೃತಕ ಸಿಹಿಕಾರಕಗಳನ್ನೂ ಮಿತ ಪ್ರಮಾಣದಲ್ಲೇ ಬಳಸುವುದು ಉತ್ತಮ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ ಹಾಗೂ ಆರೋಗ್ಯಕರ ಜೀವನಶೈಲಿಯೇ ಮೆದುಳು ಮತ್ತು ದೇಹದ ಆರೋಗ್ಯ ಕಾಪಾಡುವ ಪ್ರಮುಖ ಮಾರ್ಗವಾಗಿದೆ.

