ಬೆಂಗಳೂರು: ವಾಸ ಸ್ಥಳ ಬದಲಾವಣೆ ಮಾಡಿದರೆ ಎಸ್ಐಆರ್ ನಮೂನೆ ಇಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ. ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಫಾರ್ಮ್ 8 ಭರ್ತಿ ಮಾಡಿ ನೀವು ಈಗಿರುವ ಸ್ಥಳಕ್ಕೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆ ಕುರಿತಾದ ಗೊಂದಲಗಳ ಬಗ್ಗೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ಮತದಾರರು ವಾಸ ಸ್ಥಳ ಬದಲಿಸಿದ್ದಲ್ಲಿ ಅಂತವರಿಗೆ ಗಣತಿ ನಮೂನೆ ನೀಡುವುದಿಲ್ಲ. ಅಂತಹ ಮತದಾರರು ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ನಿಗದಿತ ದಾಖಲೆಗಳೊಂದಿಗೆ ಫಾರ್ಮ್ 8 ಭರ್ತಿ ಮಾಡಿ ವಾಸ ಸ್ಥಳ ಬದಲಾವಣೆ ಮಾಡಿಕೊಳ್ಳಬೇಕೂ ಎಂದು ತಿಳಿಸಲಾಗಿದೆ.
ಈಗಾಗಲೇ ಗಣತಿ ನಮೂನೆ ಪಡೆದುಕೊಂಡಿರುವ ಮತದಾರರು ಮಾಹಿತಿಗಳನ್ನು ಭರ್ತಿ ಮಾಡಿ ಸಹಿ ಹಾಕಿ ಆಗಸ್ಟ್ 8ರೊಳಗೆ ಬಿಎಲ್ಒ ಗೆ ವಾಪಸ್ ನೀಡಬೇಕು. ಇಲ್ಲದಿದ್ದಲ್ಲಿ ಅವರ ಹೆಸರು ಮತದಾರರ ಪಟ್ಟಿಯಿಂದ ಕೈ ಬಿಡಲಾಗುವುದು ಎಂದು ತಿಳಿಸಿದ್ದಾರೆ.

