ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಬರೋಬ್ಬರಿ 47.02 ಲಕ್ಷ ಮತದಾರರ ಹೆಸರುಗಳು ಕರಡು ಪಟ್ಟಿಯಿಂದ ಡಿಲೀಟ್ (Delete) ಆಗಲಿವೆ. ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿ ಅಧಿಕೃತ ಮಾಹಿತಿ ನೀಡಿದ್ದಾರೆ.
ಆಬ್ಸೆಂಟ್ (ಪತ್ತೆಯಾಗದವರು), ಶಿಫ್ಟೆಡ್ (ಸ್ಥಳಾಂತರಗೊಂಡವರು), ಡೈಡ್ (ಮೃತಪಟ್ಟವರು) ಹಾಗೂ ಡೂಪ್ಲಿಕೇಟ್ (ಒಂದಕ್ಕಿಂತ ಹೆಚ್ಚು ಕಡೆ ನೋಂದಾಯಿತ) ಎಂಬ ನಾಲ್ಕು ವಿಭಾಗಗಳಡಿ ಈ 47.02 ಲಕ್ಷ ಮತದಾರರನ್ನು ವರ್ಗೀಕರಿಸಲಾಗಿದ್ದು, ಶೀಘ್ರದಲ್ಲೇ ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಲ್ಲಿ ಇವರ ಹೆಸರುಗಳು ಇರುವುದಿಲ್ಲ.
ವರ್ಗೀಕರಣ: ಯಾವ ವಿಭಾಗದಲ್ಲಿ ಎಷ್ಟು ಮತದಾರರು?
ಗುರುತಿಸಲಾದ 47.02 ಲಕ್ಷ ಅಸಂಖ್ಯಾತ ನಮೂನೆಗಳಲ್ಲಿ (UEFs) ಸಿಂಹಪಾಲು ಸ್ಥಳಾಂತರಗೊಂಡವರದ್ದಾಗಿದೆ:
ಶಾಶ್ವತವಾಗಿ ಸ್ಥಳಾಂತರಗೊಂಡವರು (Shifted): 27,67,075 ಮತದಾರರು (ಶೇ. 4.99)
ಮೃತಪಟ್ಟವರು (Dead): 10,20,351 ಮತದಾರರು (ಶೇ. 1.84)
ಪತ್ತೆಯಾಗದವರು/ಆಬ್ಸೆಂಟ್ (Absent): 6,15,377 ಮತದಾರರು (ಶೇ. 1.11)
ಒಂದಕ್ಕಿಂತ ಹೆಚ್ಚು ಕಡೆ ನೋಂದಣಿ (Duplicate): 2,86,312 ಮತದಾರರು (ಶೇ. 0.52)
ಇತರೆ: 12,977 ಮತದಾರರು
ಹೊಸ ವಿಳಾಸಕ್ಕೆ ತೆರಳಿದವರು ತಮ್ಮ ಹಳೆಯ ವಿಳಾಸದಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಕರಡು ಪಟ್ಟಿ ಪ್ರಕಟವಾದ ನಂತರ ಫಾರ್ಮ್-6 (Form 6) ಮೂಲಕ ತಮ್ಮ ಹೊಸ ವಿಳಾಸದ ಕ್ಷೇತ್ರದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅರ್ಜಿ ಸಲ್ಲಿಸಬಹುದು
2002ರ ಮತದಾರರ ವಿವರ ಇಲ್ಲದಿದ್ದರೂ ಆತಂಕ ಬೇಡ
ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ ಶೇ. 91.61 ರಷ್ಟು ಮಂದಿಯ ವಿವರಗಳನ್ನು 2002ರ ಮತದಾರರ ಪಟ್ಟಿಯೊಂದಿಗೆ ಯಶಸ್ವಿಯಾಗಿ ಮ್ಯಾಪಿಂಗ್ (Mapping) ಮಾಡಲಾಗಿದೆ.
ಆಗಸ್ಟ್ 8ರಂದು ಕರಡು ಪಟ್ಟಿ: 2002ರ ಪಟ್ಟಿಯಲ್ಲಿ ವಿವರ ಮ್ಯಾಪ್ ಆಗದವರು, ಎನ್ಯೂಮರೇಷನ್ ಅರ್ಜಿಯ ಕೊನೆಯ ಕಾಲಂನಲ್ಲಿ ತಮ್ಮ ಪ್ರಸ್ತುತ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಬಿಎಲ್‌ಒಗಳಿಗೆ ಸಲ್ಲಿಸಿದರೆ, ಅವರ ಹೆಸರು ಮುಂಬರುವ ಆಗಸ್ಟ್ 8ರ ಕರಡು ಪಟ್ಟಿಯಲ್ಲಿ ಮುಂದುವರಿಯಲಿದೆ.
17.19 ಲಕ್ಷ ಮಂದಿಗೆ ನೋಟಿಸ್: 2002ರ ವಿವರಗಳನ್ನು ಭರ್ತಿ ಮಾಡದೆ ಅರ್ಜಿ ಹಿಂದಿರುಗಿಸಿರುವ 17.19 ಲಕ್ಷ ಮತದಾರರ ಹೆಸರು ಕರಡು ಪಟ್ಟಿಯಲ್ಲಿದ್ದರೂ, ಮುಂದೆ ಇಆರ್‌ಒ (ERO – ಮತದಾರರ ನೋಂದಣಾಧಿಕಾರಿ) ಅವರಿಂದ ನೋಟಿಸ್ ಬರಲಿದೆ. ಆ ಬಳಿಕ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಕರಣಗಳು
ರಾಜ್ಯದ ಒಟ್ಟು ASDDO ಪ್ರಕರಣಗಳಲ್ಲಿ ಸುಮಾರು ಶೇ. 50% ಕ್ಕೂ ಹೆಚ್ಚು (ಬೆನ್ನಿಟ್ಟು 25 ಲಕ್ಷಕ್ಕೂ ಅಧಿಕ) ಪ್ರಕರಣಗಳು ಬೆಂಗಳೂರು ನಗರ ಮತ್ತು ಅದಕ್ಕೆ ಒಳಪಡುವ ನಿಗಮ ವ್ಯಾಪ್ತಿಗಳಿಂದಲೇ ವರದಿಯಾಗಿವೆ.
ಬೆಂಗಳೂರು ನಗರ ಜಿಲ್ಲೆ: 7,54,950
ದಕ್ಷಿಣ ನಗರ ನಿಗಮ: 6,05,273
ಮಧ್ಯ ನಗರ ನಿಗಮ: 5,75,140
ಉತ್ತರ ನಗರ ನಿಗಮ: 5,23,492
ಇತರ ಜಿಲ್ಲೆಗಳ ವಿವರ: ಬೆಂಗಳೂರು ಹೊರತುಪಡಿಸಿ ಬೆಳಗಾವಿ (1.80 ಲಕ್ಷ), ಧಾರವಾಡ (1.60 ಲಕ್ಷ), ರಾಯಚೂರು (1.08 ಲಕ್ಷ), ಕೊಪ್ಪಳ (1.03 ಲಕ್ಷ), ಕಲುಬುರಗಿ (1.03 ಲಕ್ಷ) ಹಾಗೂ ಶಿವಮೊಗ್ಗ (99 ಸಾವಿರ) ಜಿಲ್ಲೆಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಸ್ಥಳ ಪರಿಶೀಲನೆ ಹೇಗೆ ನಡೆಯುತ್ತಿದೆ?
ಮತದಾರರ ಹೆಸರುಗಳನ್ನು ಕೈಬಿಡುವ ಮುನ್ನ ಬಿಎಲ್‌ಒ (BLO) ಸಿಬ್ಬಂದಿ ಕಟ್ಟುನಿಟ್ಟಿನ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ:
ಮೃತಪಟ್ಟವರಿಗೆ ಸಂಬಂಧಿಸಿದಂತೆ ಕುಟುಂಬಸ್ಥರಿಂದ ಮರಣ ಪ್ರಮಾಣಪತ್ರ ಅಥವಾ ಸ್ಥಳ ಮಹಜರು ನಡೆಸಲಾಗುತ್ತಿದೆ.
ಸ್ಥಳಾಂತರಗೊಂಡ ಹಾಗೂ ಆಬ್ಸೆಂಟ್ ಮತದಾರರ ವಿವರಗಳಿಗೆ ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ.
ಈ ಮಾಹಿತಿಯನ್ನು ಪ್ರತಿದಿನವೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುತ್ತಿದ್ದು, ಯಾವುದೇ ಅರ್ಹ ಮತದಾರ ಹೊರಗುಳಿಯದಂತೆ ನೋಡಿಕೊಳ್ಳಲಾಗುತ್ತಿದೆ.
ಪ್ರಮುಖ ದಿನಾಂಕಗಳು:
ಆಗಸ್ಟ್ 8: ಮನೆ ಮನೆ ಎನ್ಯೂಮರೇಷನ್ ಹಾಗೂ ಡಿಜಿಟಲೀಕರಣ ಪೂರ್ಣಗೊಳ್ಳುವ ಕೊನೆಯ ದಿನ.
ಆಗಸ್ಟ್ 17: ಕರಡು ಮತದಾರರ ಪಟ್ಟಿ ಪ್ರಕಟಣೆ.

