ಬೆಂಗಳೂರು: 384 ಕೆಎಎಸ್ ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆ ಪಾರದರ್ಶಕವಾಗಿ ನಡೆದಿದೆ. ಅಕ್ರಮ ನಡೆದಿಲ್ಲ, ದೋಷರಹಿತವಾಗಿ ಪರೀಕ್ಷೆ ನಡೆಸಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ(ಕೆ.ಪಿ.ಎಸ್.ಸಿ.) ಸ್ಪಷ್ಟನೆ ನೀಡಿದೆ.
ಆಯೋಗದ ಕಾರ್ಯದರ್ಶಿ ಕೆ. ಜ್ಯೋತಿಯವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಗುರುವಾರ ವರದಿ ಸಲ್ಲಿಸಿದ್ದಾರೆ. ಒಂದೇ ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷೆ ಬರೆದ 15 ಮಂದಿ ಉತ್ತೀರ್ಣರಾಗಿ 1:3 ಅನುಪಾತದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎನ್ನುವ ಆರೋಪವಿದೆ.
ಈ ಕುರಿತಾಗಿ ಪರಿಶೀಲನೆ ನಡೆಸಿದ್ದು, ಒಂದು ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದ 12 ಜನ ಉತ್ತೀರ್ಣರಾಗಿದ್ದಾರೆ. ಈ ಕೊಠಡಿಯ ಸಿಸಿ ಕ್ಯಾಮೆರಾ ವಿಡಿಯೋ ಪರಿಶೀಲಿಸಲಾಗಿದೆ. ಯಾವುದೇ ಅಕ್ರಮ ನಡೆದಿಲ್ಲ. ಇದೇ ರೀತಿ ಇನ್ನೆರಡು ಕುಠಡಿಗಳಲ್ಲಿ 10 ಮತ್ತು 11 ಜನ, ಮತ್ತೆರಡು ಕೊಠಡಿಗಳಲ್ಲಿ 7 ಜನ ಉತ್ತೀರ್ಣರಾಗಿದ್ದಾರೆ. ಎಲ್ಲಾ ಕೊಠಡಿಗಳ ಸಿಸಿ ಕ್ಯಾಮೆರಾ ಪರಿಶೀಲಿಸಲಾಗಿದೆ.
ಇನಿಷಿಯಲ್ ಅಥವಾ ಉಪನಾಮ ಒಂದೇ ಇರುವ ನಾಲ್ವರು ಒಂದೇ ಕುಟುಂಬದವರಾಗಿದ್ದು, ಅವರು ಉತ್ತೀರ್ಣರಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಪರಿಶೀಲನೆಯ ವೇಳೆ ಅವರು ಯಾರೂ ಒಂದೇ ಕುಟುಂಬದವರಲ್ಲ ಎಂದು ಗೊತ್ತಾಗಿದೆ. ನ್ಯಾಯಾಲಯದ ಸೂಚನೆಯಂತೆ ಪರೀಕ್ಷೆಯ ಹಿಂದಿನ ದಿನ ರಾತ್ರಿವರೆಗೂ ಹಾಲ್ ಟಿಕೆಟ್ ನೀಡಲಾಗಿದೆ. ಇದರಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಮುಖ್ಯ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸಿದ್ದಾರೆ.
ಅಕ್ರಮ ನಡೆದಿದೆ ಎಂದು ಜಾಲತಾಣದಲ್ಲಿ ದೂರಲಾಗಿದೆ. ಅಕ್ರಮ ನಡೆದ ಬಗ್ಗೆ ಯಾರೊಬ್ಬರೂ ಯಾವುದೇ ಸಾಕ್ಷ್ಯ ನೀಡಿಲ್ಲ, ದೂರು ನೀಡಿಲ್ಲ ಎಂದು ಕೆ.ಪಿ.ಎಸ್.ಸಿ. ಕಾರ್ಯದರ್ಶಿ ಜ್ಯೋತಿ ತಿಳಿಸಿದ್ದಾರೆ.

