ಮದುವೆಯಾಗಿ ಮಕ್ಕಳೊಂದಿಗೆ ಸುಂದರ ಸಂಸಾರ ನಡೆಸುತ್ತಿದ್ದ ಆ ಕುಟುಂಬಕ್ಕೆ ಅವರೇ ದೊಡ್ಡ ಆಧಾರವಾಗಿದ್ದರು. ಕೈತುಂಬ ಸಂಬಳ ಬರುತ್ತಿದ್ದ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ವೃದ್ಧ ತಂದೆ-ತಾಯಿಯ ಭವಿಷ್ಯಕ್ಕೆ ಆಸರೆಯಾಗಿದ್ದರು. ಆದರೆ ಒಂದೇ ಒಂದು ರಸ್ತೆ ಅಪಘಾತ ಇಡೀ ಕುಟುಂಬದ ಬದುಕನ್ನೇ ಕತ್ತಲೆಗೆ ತಳ್ಳಿತು. ಕುಟುಂಬದ ಆಧಾರಸ್ತಂಭವಾಗಿದ್ದ ವ್ಯಕ್ತಿ ಇಹಲೋಕ ತ್ಯಜಿಸಿದರು. ಇತ್ತ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ ಕುಟುಂಬಕ್ಕೆ ವಿಮಾ ಕಂಪನಿಯ ಆಕ್ಷೇಪಣೆ ಮತ್ತೊಂದು ಸಂಕಷ್ಟ ತಂದಿಟ್ಟಿತು. ಆದರೆ ಕೊನೆಗೆ ನ್ಯಾಯಾಲಯ ನೀಡಿದ ತೀರ್ಪು ಆ ಕುಟುಂಬಕ್ಕೆ ದೊಡ್ಡ ಆಸರೆಯಾಗಿದೆ.
ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ಈ ಪ್ರಕರಣದಲ್ಲಿ ಮೃತಪಟ್ಟ ಸಾಫ್ಟ್ವೇರ್ ಇಂಜಿನಿಯರ್ ಶಕ್ತಿ ಸಿಂಗ್ ಚೌಹಾಣ್ ಅವರ ಕುಟುಂಬಕ್ಕೆ ಬರೋಬ್ಬರಿ ₹3.20 ಕೋಟಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.6ರಷ್ಟು ಬಡ್ಡಿಯನ್ನೂ ಪಾವತಿಸಬೇಕು ಎಂದು ಸೂಚಿಸಿದೆ.
ಒಂದೇ ಅಪಘಾತಕ್ಕೆ ಕುಟುಂಬದ ಬದುಕು ಛಿದ್ರ!
2024ರ ಡಿಸೆಂಬರ್ 29ರಂದು ಶಕ್ತಿ ಸಿಂಗ್ ಚೌಹಾಣ್ ಅವರು ತಮ್ಮ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದರು. ಇಂದೋರ್ನ ರೌ ಪ್ರದೇಶದ ಎಸ್ರಾಕ್ ಶಾಲೆ ಸಮೀಪ ಹಿಂದಿನಿಂದ ವೇಗವಾಗಿ ಬಂದ ಬಸ್ ಅವರ ಬೈಕ್ಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶಕ್ತಿ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.
ಅವರ ಸಾವಿನಿಂದ ಪತ್ನಿ ಮಿತಾಲಿ, ಪುತ್ರಿ ಹಿಮಯಶಿ, ಪುತ್ರ ಅಹೈತ್ ಹಾಗೂ ವೃದ್ಧ ತಂದೆ-ತಾಯಿ ಅನಾಥ ಭಾವಕ್ಕೆ ಒಳಗಾಗಿದ್ದರು. ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ಶಕ್ತಿ ಸಿಂಗ್ ವಾರ್ಷಿಕವಾಗಿ ಸುಮಾರು ₹30 ಲಕ್ಷ ಆದಾಯ ಗಳಿಸುತ್ತಿದ್ದರು. ಅವರ ಆದಾಯವೇ ಕುಟುಂಬದ ಜೀವನಕ್ಕೆ ಪ್ರಮುಖ ಆಧಾರವಾಗಿತ್ತು.
ಪರಿಹಾರ ಕೊಡಲು ವಿಮಾ ಕಂಪನಿಯ ನೂರಾರು ಆಕ್ಷೇಪಣೆ!
ಕುಟುಂಬಕ್ಕೆ ಆರ್ಥಿಕ ನೆರವು ಸಿಗಬೇಕೆಂದು ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋದಾಗ ವಿಮಾ ಕಂಪನಿ ಹಲವು ಕಾರಣಗಳನ್ನು ಮುಂದಿಟ್ಟಿತು.
ಅಪಘಾತದ ವೇಳೆ ಶಕ್ತಿ ಸಿಂಗ್ ಹೆಲ್ಮೆಟ್ ಧರಿಸಿರಲಿಲ್ಲ. ಬೈಕ್ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಅಪಘಾತದ ಮಾಹಿತಿ ನೀಡಲು ಏಳು ದಿನಗಳ ವಿಳಂಬವಾಗಿದೆ ಎಂದು ಕಂಪನಿ ವಾದಿಸಿತು. ಬಸ್ ಚಾಲಕನ ಚಾಲನಾ ಪರವಾನಗಿ ಮತ್ತು ಅಗತ್ಯ ದಾಖಲೆಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿತು.
ಆದರೆ ನ್ಯಾಯಾಲಯದ ಮುಂದೆ ಇದ್ದ ಸಾಕ್ಷ್ಯಗಳು ಬೇರೆಯದೇ ಕಥೆ ಹೇಳಿದ್ದವು. ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ಪೊಲೀಸ್ ತನಿಖೆಯಲ್ಲಿ ಬಸ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬುದು ಬೆಳಕಿಗೆ ಬಂದಿತ್ತು. ವೇಗವಾಗಿ ಬಂದ ಬಸ್ ಹಿಂದಿನಿಂದ ಬೈಕ್ಗೆ ಡಿಕ್ಕಿ ಹೊಡೆದಿರುವುದಕ್ಕೂ ಸಾಕ್ಷ್ಯಗಳು ಲಭ್ಯವಾಗಿದ್ದವು.
ಕೊನೆಗೂ ಕುಟುಂಬಕ್ಕೆ ನ್ಯಾಯ ಒದಗಿಸಿದ ಕೋರ್ಟ್
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅವಾನ್ ಮೊಹಮ್ಮದ್ ಅವರು ವಿಮಾ ಕಂಪನಿಯ ವಾದಗಳನ್ನು ತಳ್ಳಿಹಾಕಿದರು. ಮೃತ ವ್ಯಕ್ತಿಯ ನಿರ್ಲಕ್ಷ್ಯವನ್ನು ಸಾಬೀತುಪಡಿಸುವಲ್ಲಿ ವಿಮಾ ಕಂಪನಿ ವಿಫಲವಾಗಿದೆ ಎಂದು ಸ್ಪಷ್ಟಪಡಿಸಿದರು.
ಇದರ ಬೆನ್ನಲ್ಲೇ ಶಕ್ತಿ ಸಿಂಗ್ ಅವರ ಕುಟುಂಬಕ್ಕೆ ₹3,20,60,582 ಪರಿಹಾರ ನೀಡುವಂತೆ ಆದೇಶಿಸಿದರು. ಈ ಮೊತ್ತಕ್ಕೆ ವಾರ್ಷಿಕ ಶೇ.6ರಷ್ಟು ಬಡ್ಡಿಯನ್ನೂ ಪಾವತಿಸಬೇಕೆಂದು ಸೂಚಿಸಿದರು.
ಪತ್ನಿ, ಮಕ್ಕಳಿಗೆ ದೊಡ್ಡ ಪಾಲು
ನ್ಯಾಯಾಲಯದ ಆದೇಶದಂತೆ ಒಟ್ಟು ಪರಿಹಾರದ ಮೊತ್ತದಲ್ಲಿ ಶೇ.40ರಷ್ಟು ಹಣವನ್ನು ಪತ್ನಿ ಮಿತಾಲಿಗೆ, ತಲಾ ಶೇ.20ರಷ್ಟು ಹಣವನ್ನು ಪುತ್ರಿ ಹಿಮಯಶಿ ಮತ್ತು ಪುತ್ರ ಅಹೈತ್ಗೆ ಹಾಗೂ ತಲಾ ಶೇ.10ರಷ್ಟು ಹಣವನ್ನು ತಂದೆ ಮತ್ತು ತಾಯಿಗೆ ನೀಡಲು ನಿರ್ಧರಿಸಲಾಗಿದೆ. ಒಬ್ಬ ವ್ಯಕ್ತಿಯ ಅಗಲಿಕೆಯಿಂದ ಕುಟುಂಬಕ್ಕೆ ಉಂಟಾದ ನಷ್ಟವನ್ನು ಯಾವುದೇ ಹಣದಿಂದ ತುಂಬಲು ಸಾಧ್ಯವಿಲ್ಲ. ಆದರೂ ನ್ಯಾಯಾಲಯದ ಈ ತೀರ್ಪು ಪತ್ನಿ, ಮಕ್ಕಳು ಹಾಗೂ ವೃದ್ಧ ತಂದೆ-ತಾಯಿಯ ಮುಂದಿನ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಮಹತ್ವದ ನೆರವಾಗಿದೆ.

