ಚೆನ್ನೈ: ವಿಜಯ್ ನೇತೃತ್ವದ ಸಚಿವ ಸಂಪುಟಕ್ಕೆ ಎಐಎಡಿಎಂಕೆ ಬಂಡಾಯ ನಾಯಕರನ್ನು ಸೇರಿಸಿಕೊಳ್ಳುವ ಬಗ್ಗೆ ತನ್ನ ನಿಲುವನ್ನು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಬುಧವಾರ ಸ್ಪಷ್ಟಪಡಿಸಿದೆ.
ಎಐಎಡಿಎಂಕೆ ಪಕ್ಷಾಂತರಿಗಳನ್ನು ಸರ್ಕಾರಕ್ಕೆ ಸೇರಿಸಿಕೊಂಡರೆ ತಮ್ಮ ಪಕ್ಷವು ಟಿವಿಕೆಗೆ ಬೆಂಬಲ ನೀಡುವ ನಿರ್ಧಾರವನ್ನು ಮರುಪರಿಶೀಲಿಸುತ್ತದೆ ಎಂದು ತಮಿಳುನಾಡು ಸಿಪಿಐ(ಎಂ) ಕಾರ್ಯದರ್ಶಿ ಪಿ. ಷಣ್ಮುಗಂ ಕಟು ಎಚ್ಚರಿಕೆ ನೀಡಿದ ಒಂದು ದಿನದ ನಂತರ ಈ ಸ್ಪಷ್ಟನೆ ನೀಡಲಾಗಿದೆ.
ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ ತಮಿಳುನಾಡು ಸಚಿವ ಆಧವ್ ಅರ್ಜುನ, ಎಐಎಡಿಎಂಕೆ ಶಾಸಕರನ್ನು ಸಂಪುಟದಲ್ಲಿ ಸೇರಿಸಲಾಗುವುದಿಲ್ಲ ಮತ್ತು ಈ ಕುರಿತ ವರದಿಗಳು ಕೇವಲ ಊಹಾಪೋಹಗಳಾಗಿವೆ. ಮೈತ್ರಿಕೂಟದ ಭವಿಷ್ಯದ ಬಗ್ಗೆ ಹೇಳುವುದಾದರೆ ಟಿವಿಕೆ ನೇತೃತ್ವದ ಒಕ್ಕೂಟವು ಅಖಂಡವಾಗಿದೆ ಮತ್ತು ಸಿಎಂ ವಿಜಯ್ ಶೀಘ್ರದಲ್ಲೇ ಸಂಪುಟ ವಿಸ್ತರಣೆಯನ್ನು ನಡೆಸಲಿದ್ದಾರೆ. ಮುಖ್ಯಮಂತ್ರಿಯವರು ಸಂಪುಟವು ಒಂದೇ ಕುಟುಂಬದಂತೆ ಕಾರ್ಯನಿರ್ವಹಿಸಬೇಕೆಂದು ಬಯಸುತ್ತಾರೆ. ಬೆಂಬಲ ನೀಡಿದ ಪಕ್ಷಗಳು ಸಂಪುಟದಲ್ಲಿ ಪ್ರತಿನಿಧಿಸಬೇಕೆಂದು ಅವರು ಬಯಸುತ್ತಾರೆ ಎಂದು ಹೇಳಿದ್ದಾರೆ.

