ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಆದ ಎಸ್. ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಶಿವಮೊಗ್ಗ ವಕೀಲರ ಸಂಘದ ಪದಾಧಿಕಾರಿಗಳ ನಿಯೋಗದವರು ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ, ಶಿವಮೊಗ್ಗಕ್ಕೆ ಹೈಕೋರ್ಟ್ ಸಂಚಾರಿ ಪೀಠದ ಅಗತ್ಯತೆಯ ಕುರಿತು ಸಮಾಲೋಚನೆ ನಡೆಸಿ, ಮನವಿ ಪತ್ರ ಸಲ್ಲಿಸಿದರು.
ಮಧ್ಯ ಕರ್ನಾಟಕದ ಜನರ ಬಹುಕಾಲದ ಬೇಡಿಕೆಯಾಗಿರುವ ‘ಹೈಕೋರ್ಟ್ ಸಂಚಾರಿ ಪೀಠ’ವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವಂತೆ ಆಗ್ರಹಿಸಿ, ಬೆಂಗಳೂರಿನ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕೃಷ್ಣಾ’ದಲ್ಲಿ ಶಿವಮೊಗ್ಗದ ಹಿರಿಯ ವಕೀಲರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು. ಈ ಭೇಟಿ ನಡೆಯಿತು.
ಮನವಿ ಪತ್ರದಲ್ಲಿರುವ ಪ್ರಮುಖ ಅಂಶಗಳು:
ಕೈಗೆಟುಕುವ ನ್ಯಾಯ: ಬೆಂಗಳೂರಿನಿಂದ ಸುಮಾರು 250 ರಿಂದ 300 ಕಿ.ಮೀ ದೂರದಲ್ಲಿರುವ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಲಕ್ಷಾಂತರ ಜನರಿಗೆ ಸುಲಭವಾಗಿ, ಶೀಘ್ರವಾಗಿ ಮತ್ತು ಕೈಗೆಟುಕುವ ವೆಚ್ಚದಲ್ಲಿ ನ್ಯಾಯಾಲಯದ ಸೌಲಭ್ಯ ಒದಗಿಸಲು ಶಿವಮೊಗ್ಗದಲ್ಲಿ ಸಂಚಾರಿ ಪೀಠದ ಸ್ಥಾಪನೆ ಅತ್ಯಗತ್ಯವಾಗಿದೆ.
ಸಮಿತಿಯ ಮಾರ್ಗಸೂಚಿ ಪಾಲನೆ : ನ್ಯಾಯಮೂರ್ತಿ ಜಸ್ವಂತ್ ಸಿಂಗ್ ಸಮಿತಿಯ ಮಾರ್ಗಸೂಚಿಗಳ ಅನ್ವಯ ಸಂಚಾರಿ ಪೀಠದ ಸ್ಥಾಪನೆಗೆ ಅಗತ್ಯವಿರುವ ಎಲ್ಲಾ ಅರ್ಹತೆಗಳನ್ನು ಮಧ್ಯ ಕರ್ನಾಟಕ ಭಾಗವು ಸಂಪೂರ್ಣವಾಗಿ ಹೊಂದಿದೆ.
ಸಮರ್ಥ ವಕೀಲರ ಬೆಂಬಲ: ಶಿವಮೊಗ್ಗ ಜಿಲ್ಲೆಯಲ್ಲೇ 18 ಜನ ಹಿರಿಯ ವಕೀಲರನ್ನೊಳಗೊಂಡ ಸಮರ್ಥ ವಕೀಲರ ತಂಡವಿದ್ದು, ಈ ಭಾಗದ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕ ಸಂಘ-ಸಂಸ್ಥೆಗಳ ಒಮ್ಮತದ ಬೆಂಬಲ ಈ ಬೇಡಿಕೆಗಿದೆ.
ಹೈದರಾಬಾದ್ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಜನರಿಗಾಗಿ ಕಲಬುರಗಿ ಮತ್ತು ಧಾರವಾಡಗಳಲ್ಲಿ ಸಂಚಾರಿ ಪೀಠಗಳನ್ನು ಯಶಸ್ವಿಯಾಗಿ ಸ್ಥಾಪಿಸಿರುವ ಮಾದರಿಯಲ್ಲೇ, ಸಾರ್ವಜನಿಕರ ಹಿತದೃಷ್ಟಿಯಿಂದ ಮಧ್ಯ ಕರ್ನಾಟಕ ಭಾಗದ ಕೇಂದ್ರಸ್ಥಾನವಾದ ಶಿವಮೊಗ್ಗದಲ್ಲೂ ಉಚ್ಚ ನ್ಯಾಯಾಲಯದ ಸಂಚಾರಿ ಪೀಠವನ್ನು ಸ್ಥಾಪಿಸುವಂತೆ ಕೋರಲಾಯಿತು.
ಈ ಸಂದರ್ಭದಲ್ಲಿ ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹಾಗೂ ಶಿವಮೊಗ್ಗದ ಹಿರಿಯ ವಕೀಲರಾದ ಬಸಪ್ಪಗೌಡ, ಕೆ.ಪಿ. ಶ್ರೀಪಾಲ್, ಲಕ್ಷ್ಮಿಕಾಂತ್ ಚಿಮಣೂರು ಇತರರು ಉಪಸ್ಥಿತರಿದ್ದರು.

