HomeIndiaನಿತೀಶ್ ಕುಮಾರ್‌ ಗಾಗಿ 9 ಕೊಲೆ ಮಾಡಿಸಿದ್ದೇನೆ ಎಂದ ಜೆಡಿಯು ಶಾಸಕ ಅನಂತ್ ಕುಮಾರ್ ಸಿಂಗ್:...

ನಿತೀಶ್ ಕುಮಾರ್‌ ಗಾಗಿ 9 ಕೊಲೆ ಮಾಡಿಸಿದ್ದೇನೆ ಎಂದ ಜೆಡಿಯು ಶಾಸಕ ಅನಂತ್ ಕುಮಾರ್ ಸಿಂಗ್: ರಾಜಕೀಯ ಬಿರುಗಾಳಿಯೆಬ್ಬಿಸಿದ ಹೇಳಿಕೆ

ಪಾಟ್ನಾ: ಮಾಜಿ ಸಿಎಂ ನಿತೀಶ್ ಕುಮಾರ್ ಗಾಗಿ ನಾನು 9 ಜನರ ಕೊಲೆ ಮಾಡಿಸಿದ್ದೇನೆ ಎಂದು ಜೆಡಿಯು ಶಾಸಕ ಅನಂತ್ ಕುಮಾರ್ ಸಿಂಗ್ ಹೇಳಿಕೆ ನೀಡಿದ್ದು, ಬಿಹಾರ ರಾಜಕೀಯದಲ್ಲಿ ಭಾರಿ ಕೋಲಾಹಲವನ್ನು ಸೃಷ್ಟಿಸಿದೆ.

ಬಿಹಾರ ವಿಧಾನ ಪರಿಷತ್ತಿನ ಎಂಟು ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಗಳು ಅಕ್ಟೋಬರ್ 23 ರಂದು ನಡೆಯಲಿದ್ದು, ಅಕ್ಟೋಬರ್ 27 ರಂದು ಮತ ಎಣಿಕೆ ನಡೆಯಲಿದೆ. ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಜೆಡಿಯು ಶಾಸಕ ಅನಂತ್ ಕುಮಾರ್ ಸಿಂಗ್ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಚಾರವಾಗಿ ರಾಷ್ಟ್ರೀಯ ಜನತಾ ದಳ(RJD)ವು ಜೆಡಿಯು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಆದರೆ ಜೆಡಿಯು ಮಾತ್ರ ಇದರಿಂದ ಅಂತರ ಕಾಯ್ದುಕೊಂಡಿದೆ. ತನ್ನ ಹೇಳಿಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಅನಂತ್ ಕುಮಾರ್ ಸಿಂಗ್ ತಾವು ಹೇಳಿದ್ದು ಹಾಗಲ್ಲ ಎಂದು ಯೂ ಟರ್ನ್ ಹೊಡೆದಿದ್ದಾರೆ.

ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ರಾಜಕೀಯ ಪ್ರತಿಸ್ಪರ್ಧಿ ನೀರಜ್ ಕುಮಾರ್ ಅವರಿಗೆ ಪಕ್ಷವು ಟಿಕೆಟ್ ನೀಡಿರುವುದಕ್ಕೆ ಅಸಮಾಧಾನಗೊಂಡಿರುವ ಅನಂತ್ ಸಿಂಗ್, ತಮ್ಮ ಎದುರಾಳಿಯನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ಈ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಿತೀಶ್ ಕುಮಾರ್ ಮತ್ತು ನನ್ನ ನಡುವೆ ದೀರ್ಘಕಾಲದ ಒಡನಾಟವಿದೆ. ಅವರಿಗೆ ಸಹಾಯ ಮಾಡಲು ನಾನು ಒಂಬತ್ತು ಜನರ ಕೊಲೆ ಮಾಡಿಸಿದ್ದೇನೆ. ಅವರು ರಾಜಕೀಯವಾಗಿ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಕಠಿಣ ಸಮಯದಲ್ಲಿ ನಾನು ಅವರ ಬೆಂಬಲಕ್ಕೆ ನಿಂತಿದ್ದೆ ಎಂದು ಅವರು ಹೇಳಿದ್ದಾರೆ.

ಹಳೆಯ ರಾಜಕೀಯ ವೈಷಮ್ಯಗಳ ಬಗ್ಗೆ ಪ್ರಸ್ತಾಪಿಸಿದ ಸಿಂಗ್, ನೀರಜ್ ಕುಮಾರ್ ಈ ಹಿಂದೆ ತಮ್ಮನ್ನು ವಿರೋಧಿಸಿದ್ದರು ಎಂದು ಆರೋಪಿಸಿದರು. ತಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ವ್ಯಕ್ತಿಯನ್ನೇ ಪಕ್ಷವು ಏಕೆ ಆಯ್ಕೆ ಮಾಡಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಅನಂತ್ ಕುಮಾರ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ, ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದೆ. ಅನಂತ್ ಸಿಂಗ್ ಅವರ ಹೇಳಿಕೆಯು ರಾಜಕೀಯ ಅಪರಾಧಗಳನ್ನು ಒಪ್ಪಿಕೊಂಡಂತೆ ಆಗಿದೆ ಎಂದು ಆರೋಪಿಸಿದೆ.

ಆರ್‌ಜೆಡಿ ನಾಯಕ ಶಕ್ತಿ ಸಿಂಗ್ ಯಾದವ್ ಮಾತನಾಡಿ, ಅನಂತ್ ಸಿಂಗ್ 9 ಕೊಲೆಗಳನ್ನು ಮಾಡಿಸಿರುವುದಾಗಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಈ ಕೊಲೆಗಳು ನಡೆದಿವೆ ಮತ್ತು ನಿತೀಶ್ ಕುಮಾರ್‌ಗಾಗಿ ನಡೆದಿವೆ ಎಂಬುದು ಸ್ಪಷ್ಟವಾಗುತ್ತದೆ. ಜೆಡಿಯು ಕೇಂದ್ರ ಮತ್ತು ರಾಜ್ಯ ಮಟ್ಟದ ನಾಯಕರ ಒತ್ತಡದಿಂದಾಗಿ ಅನಂತ್ ಸಿಂಗ್ ನಂತರ ತಮ್ಮ ಹೇಳಿಕೆಯನ್ನು ಹಿಂಪಡೆಯಬಹುದು ಅಥವಾ ಬದಲಾಯಿಸಬಹುದು. ಆದರೆ, ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ತಮ್ಮ ಅಧಿಕಾರವನ್ನು ಗಟ್ಟಿಗೊಳಿಸಿಕೊಳ್ಳಲು ರಾಜ್ಯದ ಕುಖ್ಯಾತ ಅಪರಾಧ ಗುಂಪುಗಳೊಂದಿಗೆ (ಮೋತಿಹಾರಿ, ಮುಜಾಫರ್‌ಪುರ, ವೈಶಾಲಿ ಅಥವಾ ಮೊಕಾಮಾ ಪ್ರದೇಶದವರು) ಕೈಜೋಡಿಸಿದ್ದರು ಎಂಬುದು ಸತ್ಯವಲ್ಲವೇ? ಆ ಕುಖ್ಯಾತ ಗುಂಪುಗಳ ಸದಸ್ಯರು ಯಾರು? ಅವರೆಲ್ಲರೂ ನಿತೀಶ್ ಕುಮಾರ್ ಅವರೊಂದಿಗೇ ಇದ್ದರು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular