ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ) ದುರ್ಗಾಪುರದಲ್ಲಿ ಆಯೋಜಿಸಲಾಗಿದ್ದ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ (ಇಂಡಕ್ಷನ್ ಪ್ರೋಗ್ರಾಂ) ನಡೆದ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಂಸ್ಥೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಬಾಲಿವುಡ್‌ನ ಪ್ರಸಿದ್ಧ ‘ಚಿಕ್ನಿ ಚಮೇಲಿ’ ಹಾಡಿಗೆ ಹೆಜ್ಜೆ ಹಾಕುತ್ತಿದ್ದ ವೇಳೆ, ಶಿಕ್ಷಕಿಯೊಬ್ಬರು ಮಧ್ಯದಲ್ಲೇ ನೃತ್ಯ ತಡೆದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಮಾನ್ಯ ಉಡುಪಿನಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮಧ್ಯಪ್ರವೇಶಿಸಿದ ಪ್ರೊಫೆಸರ್, ಇಂತಹ ಅಭಾಸದ ನೃತ್ಯ ಸಂಯೋಜನೆಗೆ ಯಾರು ಅನುಮತಿ ನೀಡಿದ್ದು ಎಂದು ಪ್ರಶ್ನಿಸಿದ್ದಾರೆ. “ಇಂತಹ ನೃತ್ಯಗಳನ್ನು ಪ್ರದರ್ಶಿಸಲು ನೀವು ಅನುಮತಿ ಪಡೆದಿದ್ದೀರಾ? ಇದೇನು ತಮಾಷೆಯೇ? ಇದನ್ನೇ ಪರಿಚಯ ಅಥವಾ ಮನರಂಜನೆ ಅನ್ನುವುದೇ? ನಿಮಗೂ ಹಾಗೂ ಸಂಸ್ಥೆಯ ಘನತೆಗೂ ಒಂದು ಮರ್ಯಾದೆ ಇರಲಿ” ಎಂದು ಗದರಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಬಣಗಳಾಗಿ ವಿಂಗಡಣೆಯಾಗಿದ್ದಾರೆ. ಕೆಲವರು ಶಿಕ್ಷಕಿಯ ಪರವಾಗಿ ಮಾತನಾಡಿ, ಎನ್‌ಐಟಿಯಂತಹ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯ ವೇದಿಕೆಯಲ್ಲಿ ಇಂತಹ ಐಟಂ ಹಾಡುಗಳಿಗೆ ಅವಕಾಶ ನೀಡಬಾರದು ಮತ್ತು ಸಂಸ್ಥೆಯ ಶಿಸ್ತನ್ನು ಕಾಪಾಡುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಕೆಲವರು ವಿದ್ಯಾರ್ಥಿಗಳ ಪರ ನಿಂತು, ನೃತ್ಯದಲ್ಲಿ ಯಾವುದೇ ರೀತಿಯ ಅಶ್ಲೀಲತೆ ಇರಲಿಲ್ಲ, ಕೇವಲ ಮನರಂಜನೆಗಾಗಿ ಮಾಡಿದ ಡ್ಯಾನ್ಸ್ ಅನ್ನು ಎಲ್ಲರಂದರಲ್ಲೂ ಈ ರೀತಿ ನಿಂದಿಸಿರುವುದು ಸರಿಯಲ್ಲ ಎಂದು ಶಿಕ್ಷಕಿಯ ನಡವಳಿಕೆಯನ್ನು ಖಂಡಿಸಿದ್ದಾರೆ. ಪ್ರಸ್ತುತ ಈ ವಿಷಯವಾಗಿ ಎನ್‌ಐಟಿ ದುರ್ಗಾಪುರ ಆಡಳಿತ ಮಂಡಳಿಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
“>

