ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ಫಾಲೋವರ್ಸ್ ಗಳಿಸಲು ಜನರು ಎಂತಹ ಕಾರ್ಯಕ್ಕೂ ಕೈಹಾಕುತ್ತಿದ್ದಾರೆ. ಇದಕ್ಕೆ ಮತ್ತೊಂದು ಹತಾಶ ಉದಾಹರಣೆ ಬಿಹಾರದಿಂದ ವರದಿಯಾಗಿದೆ. ಸೋಷಿಯಲ್ ಮೀಡಿಯಾ ರೀಲ್ಸ್ ಮಾಡುವ ಭರದಲ್ಲಿ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಗಂಗಾ ನದಿ ಡಾಲ್ಫಿನ್ ಒಂದನ್ನು ಸೈಕಲ್ಗೆ ಕಟ್ಟಿ ಹಾಕಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ವಿಡಿಯೋ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿಗಳ ಪ್ರಕಾರ ನೆಟ್ಲಾಲ್ ಕುಮಾರ್ ಎಂಬ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆರಂಭಿಕ ವಿಡಿಯೋದಲ್ಲಿ ಜೀವಂತವಾಗಿದ್ದ ಡಾಲ್ಫಿನ್ ಒಂದನ್ನು ಸೈಕಲ್ಗೆ ಕಟ್ಟಿ ಹಾಕಲಾಗಿತ್ತು. ಅದರ ಬೆನ್ನಲ್ಲೇ ಹಂಚಿಕೊಳ್ಳಲಾದ ಮತ್ತೊಂದು ವಿಡಿಯೋದಲ್ಲಿ ಡಾಲ್ಫಿನ್ ಮೃತಪಟ್ಟಿದ್ದು, ಆ ವ್ಯಕ್ತಿ ಅದರೊಂದಿಗೆ ವೀಡಿಯೊ ಚಿತ್ರೀಕರಿಸುತ್ತಿರುವುದು ಕಂಡುಬಂದಿದೆ. ಈ ಪ್ರಾಣಿಯ ಎಣ್ಣೆ ತೆಗೆಯುವ ಉದ್ದೇಶ ಹಾಗೂ ರೀಲ್ಸ್ ಮಾಡುವ ದುರಾಸೆಯಿಂದ ಈ ಕೃತ್ಯ ಎಸಗಲಾಗಿದೆ ಎಂದು ದೂರಲಾಗಿದೆ.
ಪ್ರಸ್ತುತ ವಿಶ್ವದಲ್ಲಿ ಕೇವಲ ಸುಮಾರು ಐದು ಸಾವಿರ ಗಂಗಾ ನದಿ ಡಾಲ್ಫಿನ್ಗಳು ಮಾತ್ರ ಜೀವಂತವಾಗಿವೆ. ಇಂತಹ ಅಪರೂಪದ ಜಲಚರವನ್ನು ಹತ್ಯೆ ಮಾಡಿ ವಿಡಿಯೋ ಹಂಚಿಕೊಂಡಿರುವುದಕ್ಕೆ ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಇಂತಹ ಅಪರೂಪದ ಜೀವಿಗೆ ಹಾನಿ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಬಿಹಾರ ಪೊಲೀಸ್ ಮತ್ತು ಅರಣ್ಯ ಇಲಾಖೆ ತಕ್ಷಣವೇ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
“>
“>

