ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಹೆಚ್‌ಎಂ) ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿ ಮಾರ್ಚ್ 16 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಇದರಿಂದಾಗಿ ಕರ್ನಾಟಕದಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಈ ಕುರಿತು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ (KSHCOEA) ಮಾಹಿತಿ ನೀಡಿದೆ. NHM ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳ ಅನಿರ್ಧಿಷ್ಟಾವಧಿ ಮುಷ್ಕರ ಎಂದು ಹೇಳಿದೆ.
ದಿನಾಂಕ 11-03-2026 ರಿಂದ 15-03-2026ರ ವರೆಗೆ ಕಪ್ಪುಪಟ್ಟಿ ಧರಿಸಿ ಹೊರರೋಗಿ ಸೇವೆ ನೀಡದೇ ಕೇವಲ ತುರ್ತು ಸೇವೆ ಮಾತ್ರ ಒದಗಿಸುವುದು. ದಿನಾಂಕ 16-03-2026 ಸೋಮವಾರದಿಂದ ಅನಿರ್ದಿಷ್ಟಾವಧಿವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವುದು ಎಂದು ತಿಳಿಸಿದೆ.
ನ್ಯಾಯಯುತ ಬೇಡಿಕೆಗಳು
* ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳನ್ನು ಖಾಯಂ ಮಾಡುವ ಬಗ್ಗೆ ಕೂಡಲೆ ತೀರ್ಮಾನಿಸಿ ಪ್ರಕ್ರಿಯೆ ಆರಂಭಿಸಬೇಕು.
* ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು Rationalization ಹಾಗೂ ಮರು ನೇಮಕಾತಿ ಸಹಿತ ಯಾವುದೇ ಅನ್ಯ ಕಾರಣಗಳಿಂದ ಕೆಲಸದಿಂದ ವಜಾ ಮಾಡುವ ಪ್ರಸ್ತಾವನೆಗಳನ್ನು ಕೈಬಿಡಬೇಕು ಹಾಗೂ ಈಗಾಗಲೇ ವಜಾಗೊಳಿಸಿರುವ (RBSK ತಂಡ, ಆಶಾ ಮೆಂಟರ್ಸ್, E-ಆಸ್ಪತ್ರೆ DEO ಗಳು ಮತ್ತು ಇತರೆ) ಸಿಬ್ಬಂದಿಗಳನ್ನು ಪುನಃ ಕರ್ತವ್ಯಕ್ಕೆ ಸೇರಿಸಿಕೊಳ್ಳುವ ಆದೇಶ ಹೊರಡಿಸುವುದು.
* ಈಗಾಗಲೇ ನಿವೃತ್ತ ಐಎಎಸ್ ಅಧಿಕಾರಿ ಶ್ರೀ ಶ್ರೀನಿವಾಸಚಾರಿ ವರದಿಯಂತೆ ನೀಡಿರುವ 15% ವೇತನ ಹೆಚ್ಚಳವನ್ನು ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳಿಗೆ ಅನ್ವಯ ಆಗುವಂತೆ ಬಾಕಿ (24-25 & 25-26) ವೇತನ ಪಾವತಿಸುವುದು ಹಾಗೂ ನೌಕರರಿಗೆ ಮಾರಕವಾಗಿರುವ ಕಾರ್ಯಕ್ಷಮತೆಯ ಮೌಲ್ಯಮಾಪನ ಪದ್ಧತಿಯನ್ನು ಕೈ ಬಿಡಬೇಕು.
* ಸಮಾನ ಕೆಲಸಕ್ಕೆ ಸಮಾನ ವೇತನ ಮಂಜೂರಾತಿ ಮಾಡುವುದು.
* ಮೂರು ತಿಂಗಳಿಗೆ ಒಮ್ಮೆ ವೇತನ ಪಾವತಿ ಆಗುತ್ತಿದ್ದು ಇದರಿಂದ ಜೀವನ ನಡೆಸುವುದು ಕಷ್ಟಕರವಾಗಿದ್ದು ಇನ್ನೂ ಮುಂದೆ ಪ್ರತಿ ತಿಂಗಳು ವೇತನ ಪಾವತಿ ಆಗುವಂತೆ ಮಾಡುವುದು.
* 1972ರ ಕಾಯ್ದೆಯ ಪ್ರಕಾರ ಗ್ರಾಚ್ಯುಟಿ ನೀಡುವುದು.
ಈ ಬೇಡಿಕೆಗಳ ಈಡೇರಿಕೆಗಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿ ಸಮಸ್ತ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು NHM ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳು ಮತ್ತು ಎಲ್ಲಾ ಬಾಂಧವರು ಬೆಂಬಲಿಸಬೇಕು ಎಂದು ಮನವಿ ಮಾಡಲಾಗಿದೆ.

