ಅಮೆರಿಕದ ಖ್ಯಾತ ನ್ಯಾಷನಲ್ ಫುಟ್‌ಬಾಲ್ ಲೀಗ್ (ಎನ್‌ಎಫ್‌ಎಲ್) ಮಾಜಿ ಆಟಗಾರ ಆಲ್ಫೋನ್ಸೊ ಸ್ಮಿತ್ ಜೂನಿಯರ್ (40) ಫ್ಲೋರಿಡಾದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲವಾದರೂ, ಸಾವಿಗೂ ಕೆಲ ಗಂಟೆಗಳ ಮೊದಲು ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ ಭಾವುಕ ಪೋಸ್ಟ್ ಈಗ ಕ್ರೀಡಾಲೋಕದಲ್ಲಿ ತೀವ್ರ ಆಘಾತ ಸೃಷ್ಟಿಸಿದೆ.
ಸಾವಿಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದ ಆಲ್ಫೋನ್ಸೊ, ತಾವು ಬಾಲ್ಯದಲ್ಲಿ ಎದುರಿಸಿದ ಕಿರುಕುಳ ಹಾಗೂ ಒಳಗಿನ ಮಾನಸಿಕ ಹೋರಾಟಗಳ ಬಗ್ಗೆ ತೀವ್ರ ನೋವಿನಿಂದ ಬರೆದುಕೊಂಡಿದ್ದರು. ತಮ್ಮಿಂದ ನೊಂದವರಲ್ಲಿ ಕ್ಷಮೆ ಯಾಚಿಸಿದ್ದ ಅವರು, ಜೀವನದ ಸವಾಲುಗಳ ವಿರುದ್ಧ ಹೋರಾಡಲು ತಮಗೆ ಸೂಕ್ತ ನೆರವು ಸಿಗಲಿಲ್ಲ ಎಂದು ಕಣ್ಣೀರಿಟ್ಟಿದ್ದರು. ಈ ಸಂದೇಶವನ್ನು ಗಮನಿಸಿದ ಅಭಿಮಾನಿಗಳು ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸುತ್ತಿದ್ದಾರೆ.
ವೇಕ್ ಫಾರೆಸ್ಟ್ ವಿಶ್ವವಿದ್ಯಾಲಯದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕ್ರೀಡಾರಂಗಕ್ಕೆ ಪದಾರ್ಪಣೆ ಮಾಡಿದ್ದ ಆಲ್ಫೋನ್ಸೊ, ಕಾಲೇಜು ಹಂತದಲ್ಲಿ 21 ಇಂಟರ್‌ಸೆಪ್ಶನ್‌ಗಳ ಐತಿಹಾಸಿಕ ದಾಖಲೆ ಬರೆದು ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದರು. 2009ರಲ್ಲಿ ಡೆನ್ವರ್ ಬ್ರಾಂಕೋಸ್ ತಂಡದ ಮೂಲಕ ಎನ್‌ಎಫ್‌ಎಲ್ ಪ್ರವೇಶಿಸಿದ ಇವರು, ಬಳಿಕ ಡೆಟ್ರಾಯಿಟ್ ಲಿಯನ್ಸ್ ತಂಡವನ್ನು ಪ್ರತಿನಿಧಿಸಿ ರಕ್ಷಣಾತ್ಮಕ ಆಟಗಾರನಾಗಿ ಮಿಂಚಿದ್ದರು. 2009 ರಿಂದ 2012ರ ಅವಧಿಯಲ್ಲಿ ಒಟ್ಟು 42 ಪಂದ್ಯಗಳನ್ನು ಆಡಿದ್ದ ಇವರು 88 ಟ್ಯಾಕಲ್ ಹಾಗೂ 8 ಇಂಟರ್‌ಸೆಪ್ಶನ್‌ಗಳನ್ನು ತಮ್ಮದಾಗಿಸಿಕೊಂಡಿದ್ದರು.
ಪೋಲಿಸರು ಪ್ರಕರಣದ ತನಿಖೆ ಮುಂದುವರಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿನ ನಿಜವಾದ ರಹಸ್ಯ ಹೊರಬರಬೇಕಿದೆ.

