ದಾವಣಗೆರೆ: ನವ ವಿವಾಹಿತೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದರಿಂದ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಾಹಿತಿ ತಿಳಿದ ಮದುವೆ ಮಾಡಿಸಿದ ವಧುವಿನ ಸೋದರ ಮಾವ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.
ದಾವಣಗೆರೆ ತಾಲೂಕಿನ ಗುಮ್ಮನೂರು ಗ್ರಾಮದ ಹರೀಶ್(30), ದಾವಣಗೆರೆಯ ಆನೆಕೊಂಡದ ರುದ್ರೇಶ್(36) ಆತ್ಮಹತ್ಯೆ ಮಾಡಿಕೊಂಡವರು.
ದಾವಣಗೆರೆ ತಾಲೂಕಿನ ಹುಲಿಕಟ್ಟೆ ಗ್ರಾಮದ ಸರಸ್ವತಿ ಅವರನ್ನು ಮೂರು ತಿಂಗಳ ಹಿಂದೆ ಹರೀಶ್ ಮದುವೆಯಾಗಿದ್ದರು. ಜನವರಿ 23ರಂದು ಪ್ರಿಯಕರನೊಂದಿಗೆ ಸರಸ್ವತಿ ಪರಾರಿಯಾಗಿದ್ದರು. ಹುಡುಕಾಟ ನಡೆಸಿದ ನಂತರ ಜನವರಿ 25ರಂದು ಪ್ರಿಯಕರನೊಂದಿಗೆ ಸರಸ್ವತಿ ಪತ್ತೆಯಾಗಿದ್ದರು. ಇದರಿಂದ ಮನನೊಂದ ಹರೀಶ್ ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಮದುವೆ ಮಾಡಿಸಿದ್ದ ಸರಸ್ವತಿಯ ಸೋದರ ಮಾವ ರುದ್ರೇಶ್ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸಾವಿಗೂ ಮುನ್ನ ಹರೀಶ್ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಪತ್ನಿ ಸರಸ್ವತಿ ಬೇರೆ ಯುವಕನೊಂದಿಗೆ ಓಡಿ ಹೋಗಿದ್ದಾಳೆ. ನಾನೇ ಹಿಂಸೆ ನೀಡುತ್ತಿರುವುದಾಗಿ ಸುಳ್ಳು ಆರೋಪ ಮಾಡಿದ್ದಾಳೆ. ಆಕೆ ಮತ್ತು ಆಕೆಯ ಸಂಬಂಧಿಕರು ಜೀವ ಬೆದರಿಕೆ ಹಾಕಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಮಾನ ಮರ್ಯಾದೆ ಮುಖ್ಯ. ಪ್ರೀತಿಸಿದ ಯುವಕನೊಂದಿಗೆ ಓಡಿ ಹೋಗಿ ನನಗೆ ಕಿರುಕುಳ ನೀಡಿದ ಪತ್ನಿ, ಆಕೆಯ ತಂದೆ, ತಾಯಿ, ಚಿಕ್ಕಪ್ಪನಿಗೆ ಜೀವಾವಧಿ ಶಿಕ್ಷೆಯಾಗಲಿ ಎಂದು ಬರೆದಿದ್ದಾರೆ.
ಹರೀಶ್ ಅವರ ತಂದೆ ದೂರು ನೀಡಿದ್ದು, ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ತಡೆ ಸಹಾಯವಾಣಿ:
ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

