ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಮುಂಬಡ್ತಿಗೆ ಇನ್ನು ಮುಂದೆ ಸೇವಾನುಭವ ಮತ್ತು ಜೇಷ್ಠತೆಯ ಜೊತೆಗೆ ಅಗತ್ಯ ತರಬೇತಿ ಕೂಡ ಕಡ್ಡಾಯವಾಗಿದೆ.
ನೌಕರರಿಗೆ ಮುಂಬಡ್ತಿ ನೀಡಲು ಹುದ್ದೆ ಜೊತೆಗೆ ತರಬೇತಿಯನ್ನು ಕಡ್ಡಾಯ ಮಾಡಲಾಗಿದ್ದು, ಈ ಸಂಬಂಧ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ(ಹೊರಗುತ್ತಿಗೆ ತರಬೇತಿ ಕಡ್ಡಾಯ) ನಿಯಮಗಳು -2026 ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಕರ್ನಾಟಕ ಆಡಳಿತ ಸುಧಾರಣಾ ಆಯೋಗ -2 ತನ್ನ ಮೊದಲ ವರದಿಯಲ್ಲಿ ಈ ಕುರಿತಂತೆ ಶಿಫಾರಸು ಮಾಡಿತ್ತು. ಇದನ್ನು ಸರ್ಕಾರ ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಒಪ್ಪಿ ನಿಯಮಾವಳಿಯ ಕರಡು ಸಿದ್ಧಪಡಿಸಿತ್ತು. ಇದೀಗ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಗ್ರೂಪ್ ಎ ಅಧಿಕಾರಿಗಳು ತಮ್ಮ ಆಡಳಿತಾತ್ಮಕ ಕೌಶಲ ನವೀಕರಿಸಿಕೊಳ್ಳಲು ತರಬೇತಿ ಹೊಂದುವುದು ಕಡ್ಡಾಯವಾಗಿದೆ. ಗ್ರೂಪ್ ಬಿ ವೃಂದದ ಅಧಿಕಾರಿಗಳು ಕ್ಷೇತ್ರಕಾರ್ಯ ಮತ್ತು ಕಚೇರಿ ನಿರ್ವಹಣೆ ಬಗ್ಗೆ ವಿಶೇಷ ತರಬೇತಿ ಪಡೆಯಬೇಕು. ಕಚೇರಿ ಸಹಾಯಕರು ಮತ್ತು ಇತರೆ ತಾಂತ್ರಿಕೇತರ ಗ್ರೂಪ್ ಸಿ ಸಿಬ್ಬಂದಿಗೂ ಕಡ್ಡಾಯ ತರಬೇತಿ ನಿಯಮ ಅನ್ವಯವಾಗುತ್ತದೆ.
ಸೇವಾ ನಿವೃತ್ತಿಗೆ ಎರಡು ವರ್ಷ ಮತ್ತು ಅದಕ್ಕಿಂತ ಕಡಿಮೆ ಅವಧಿ ಬಾಕಿ ಇರುವ ನೌಕರರಿಗೆ ತರಬೇತಿಯಿಂದ ವಿನಾಯಿತಿ ಇದೆ. ಗ್ರೂಪ್ ಸಿ ವೃಂದದಲ್ಲಿ ಬರುವ ಚಾಲಕರು, ಗ್ರೂಪ್ ಡಿ ನೌಕರರಿಗೆ ಈ ನಿಯಮಗಳು ಅನ್ವಯವಾಗುವುದಿಲ್ಲ. ಅವರಿಗೆ ವಿನಾಯಿತಿ ನೀಡಲಾಗಿದೆ.

