ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 96 ಸಾವಿರಕ್ಕೂ ಅಧಿಕ ಹೊರಗುತ್ತಿಗೆ ಗುತ್ತಿಗೆ ಆಧಾರಿತ ಸಿಬ್ಬಂದಿಯನ್ನು ಅವಧಿ ಮುಗಿದ ಕೂಡಲೇ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆ ಹೆಸರಲ್ಲಿ ನಕಲಿ ಆದೇಶ ಹೊರಡಿಸಿರುವುದು ಬೆಳಕಿಗೆ ಬಂದಿದೆ.
ಇಲಾಖೆಯ ಹೆಸರಲ್ಲಿ ಅಧಿಕೃತ ಎನ್ನುವ ರೀತಿಯಲ್ಲಿ ನಕಲಿ ಜ್ಞಾಪನಾ ಪತ್ರ ಹೊರಡಿಸಿ ಸರ್ಕಾರದ ಇಲಾಖೆಗಳಲ್ಲಿ ಗೊಂದಲ ಸೃಷ್ಟಿಗೆ ಕಾರಣವಾದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಣಕಾಸು ಇಲಾಖೆಯಿಂದ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಬಿಡುಗಡೆ ಮಾಡಿದ ಹಣಕಾಸು ಇಲಾಖೆ, ಸರ್ಕಾರದ ಇಲಾಖೆಗಳು, ಸಂಸ್ಥೆಗಳಲ್ಲಿ ಒಪ್ಪಂದದ ಅವಧಿ ಪೂರ್ಣಗೊಂಡ ನಂತರ ಹೊರಗುತ್ತಿಗೆ, ಒಪ್ಪಂದ ಆಧಾರಿತ ಸಿಬ್ಬಂದಿ ವಿಚಾರದಲ್ಲಿ ಯಾವುದೇ ಜ್ಞಾಪನಾ ಪತ್ರವನ್ನು ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಗುತ್ತಿಗೆ ಅವಧಿ ಮುಗಿದ ನೌಕರರನ್ನು ಬಿಡುಗಡೆ ಮಾಡಬೇಕು. ಅವಧಿ ಪೂರ್ಣಗೊಂಡ ನಂತರವೂ ಮುಂದುವರೆಸುವುದು ಸರ್ಕಾರಿ ನಿಯಮಗಳ ಉಲ್ಲಂಘನೆ ಆಗಲಿದೆ ಎಂದು ಇಲಾಖಾ ಮುಖ್ಯಸ್ಥರಿಗೆ ಎಚ್ಚರಿಸಿ ಜ್ಞಾಪನಾ ಪತ್ರ ಹೊರಡಿಸಲಾಗಿದೆ ಎನ್ನುವುದು ಸುಳ್ಳು ಎಂದು ಹಣಕಾಸು ಇಲಾಖೆಯಿಂದ ಸ್ಪಷ್ಟನೆ ನೀಡಲಾಗಿದೆ.

