ನವದೆಹಲಿ : ದೇಶದ ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ಗೆ ಹೆಚ್ಚಿನ ಗೌರವ ನೀಡುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯವು ಮಹತ್ವದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಮುಂದೆ ರಾಷ್ಟ್ರಗೀತೆಯ ಮಾದರಿಯಲ್ಲೇ ವಂದೇ ಮಾತರಂ ಅನ್ನು ಹಾಡುವಾಗಲೂ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ ಕುರಿತು ಇತ್ತೀಚಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದೆ.
1) ಗೌರವಾರ್ಥವಾಗಿ ಎದ್ದು ನಿಲ್ಲುವುದು: ರಾಷ್ಟ್ರೀಯ ಗೀತೆಯ (National Song) ಅಧಿಕೃತ ಆವೃತ್ತಿಯನ್ನು ಹಾಡುವಾಗ ಅಥವಾ ಪ್ಲೇ ಮಾಡುವಾಗ ಸಭಿಕರು ಗೌರವಪೂರ್ವಕವಾಗಿ ಎದ್ದು ನಿಲ್ಲುವುದು ಕಡ್ಡಾಯವಾಗಿದೆ.
2) ಗಾಯನದ ಕ್ರಮ: ಯಾವುದೇ ಸಂದರ್ಭದಲ್ಲಿ ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆ (National Anthem) ಎರಡನ್ನೂ ಹಾಡಬೇಕಿದ್ದರೆ, ಮೊದಲು ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ ಅನ್ನು ಹಾಡಬೇಕು.
3) ಪದ್ಮ ಪ್ರಶಸ್ತಿ ಮತ್ತು ರಾಷ್ಟ್ರಪತಿಗಳ ಕಾರ್ಯಕ್ರಮ: ಪದ್ಮ ಪ್ರಶಸ್ತಿಗಳಂತಹ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಹಾಗೂ ರಾಷ್ಟ್ರಪತಿಗಳು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ (ಅವರ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ) ‘ವಂದೇ ಮಾತರಂ’ ಅನ್ನು ಪ್ಲೇ ಮಾಡಲಾಗುವುದು.
4) ಸಾಮೂಹಿಕ ಗಾಯನ: ರಾಷ್ಟ್ರೀಯ ಗೀತೆಯನ್ನು ಹಾಡುವ ಎಲ್ಲಾ ಸಂದರ್ಭಗಳಲ್ಲಿ, ಅದರ ಅಧಿಕೃತ ಆವೃತ್ತಿಯನ್ನು ಜನರೆಲ್ಲರೂ ಸೇರಿ ಸಾಮೂಹಿಕವಾಗಿ ಹಾಡತಕ್ಕದ್ದು (Mass Singing) ಎಂದು ತಿಳಿಸಲಾಗಿದೆ.
5) ಶಾಲಾ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ (ವಂದೇ ಮಾತರಂ) ಮತ್ತು ರಾಷ್ಟ್ರಗೀತೆಯನ್ನು (ಜನ ಗಣ ಮನ) ಹಾಡುವುದನ್ನು ಜನಪ್ರಿಯಗೊಳಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ರಾಷ್ಟ್ರಧ್ವಜದ ಬಗ್ಗೆ ಗೌರವವನ್ನು ಉತ್ತೇಜಿಸಲು ಶಾಲೆಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಗಾಯನದ ಅವಧಿ ಮತ್ತು ಪ್ರಮುಖ ನಿಯಮಗಳು:
- ಅವಧಿ: ಇನ್ನು ಮುಂದೆ ಅಧಿಕೃತ ಕಾರ್ಯಕ್ರಮಗಳಲ್ಲಿ 6 ಚರಣಗಳಿರುವ, 3 ನಿಮಿಷ 10 ಸೆಕೆಂಡ್‌ಗಳ ಸುದೀರ್ಘ ಆವೃತ್ತಿಯ ವಂದೇ ಮಾತರಂ ಅನ್ನು ಹಾಡಬೇಕು ಅಥವಾ ಪ್ಲೇ ಮಾಡಬೇಕು.
- ಅವಕಾಶಗಳು: ರಾಷ್ಟ್ರಧ್ವಜಾರೋಹಣ ಸಂದರ್ಭದಲ್ಲಿ, ರಾಷ್ಟ್ರಪತಿಗಳ ಆಗಮನದ ವೇಳೆ, ಅವರ ಭಾಷಣದ ಮೊದಲು ಮತ್ತು ನಂತರ, ಹಾಗೂ ರಾಜ್ಯಪಾಲರ ಆಗಮನ ಮತ್ತು ಭಾಷಣದ ಸಂದರ್ಭಗಳಲ್ಲಿ ಈ ಗೀತೆಯನ್ನು ಹಾಡುವುದು ಕಡ್ಡಾಯ.
- ಗೌರವ ಮತ್ತು ಶಿಸ್ತು: ಮಾತೃಭೂಮಿಗೆ ನಮಿಸುವ ಉದ್ದೇಶದಿಂದ ಯಾವುದೇ ಸಂದರ್ಭದಲ್ಲಿ ಈ ಗೀತೆಯನ್ನು ಗೌರವಪೂರ್ವಕವಾಗಿ ಹಾಡಲು ಅಭ್ಯಂತರವಿಲ್ಲ, ಆದರೆ ಶಿಸ್ತು ಮತ್ತು ಶಿಷ್ಟಾಚಾರ ಪಾಲಿಸುವುದು ಮುಖ್ಯ.
- ಎಚ್ಚರಿಕೆ ಸೂಚನೆ: ಬ್ಯಾಂಡ್ ಜೊತೆಯಲ್ಲಿ ಗೀತೆಯನ್ನು ಹಾಡುವಾಗ, ಸಭಿಕರನ್ನು ಜಾಗೃತಗೊಳಿಸಲು ಗೀತೆ ಆರಂಭವಾಗುವ ಮುನ್ನ ‘ಡ್ರಮ್ ರೋಲ್’ ಅಥವಾ ‘ಬ್ಯೂಗಲ್’ ನುಡಿಸಬೇಕು.
ಆದ್ಯತೆ ಮತ್ತು ಶಾಲೆಗಳಿಗೆ ಸೂಚನೆ:
- ಆದ್ಯತೆ: ರಾಷ್ಟ್ರೀಯ ಗೀತೆ (ವಂದೇ ಮಾತರಂ) ಮತ್ತು ರಾಷ್ಟ್ರಗೀತೆ (ಜನ ಗಣ ಮನ) ಎರಡನ್ನೂ ಒಟ್ಟಿಗೆ ಹಾಡುವುದಾದರೆ, ವಂದೇ ಮಾತರಂ ಅನ್ನು ಮೊದಲೇ ಹಾಡಬೇಕು. ಈ ಸಮಯದಲ್ಲಿ ಸಭಿಕರು ಎದ್ದು ನಿಂತು ಗೌರವ ಸೂಚಿಸಬೇಕು.
- ಶಾಲೆಗಳಲ್ಲಿ ಕಡ್ಡಾಯ: ಎಲ್ಲಾ ಶಾಲೆಗಳು ತಮ್ಮ ದಿನದ ಆರಂಭವನ್ನು ವಂದೇ ಮಾತರಂ ಸಾಮೂಹಿಕ ಗಾಯನದೊಂದಿಗೆ ಮಾಡಬೇಕು. ವಿದ್ಯಾರ್ಥಿಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಧ್ವಜದ ಬಗ್ಗೆ ಗೌರವ ಮೂಡಿಸಲು ಶಾಲೆಗಳು ಕ್ರಮ ಕೈಗೊಳ್ಳಬೇಕು.
ಚಿತ್ರಮಂದಿರಗಳಿಗೆ ವಿನಾಯಿತಿ:
- ಹೊಸ ನಿಯಮಗಳ ಪ್ರಕಾರ, ಸಿನಿಮಾದ ಭಾಗವಾಗಿ ವಂದೇ ಮಾತರಂ ಹಾಡು ಬಂದರೆ ಪ್ರೇಕ್ಷಕರು ಎದ್ದು ನಿಲ್ಲುವ ಅಗತ್ಯವಿಲ್ಲ. ಚಿತ್ರದ ನಡುವೆ ಎದ್ದು ನಿಲ್ಲುವುದು ಪ್ರದರ್ಶನಕ್ಕೆ ಅಡ್ಡಿಪಡಿಸುತ್ತದೆ ಮತ್ತು ಇತರರಿಗೆ ತೊಂದರೆ ಉಂಟುಮಾಡುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಯಾಕಾಗಿ ಈ ಬದಲಾವಣೆ?
ರಾಷ್ಟ್ರಗೀತೆಗೆ (National Anthem) ನೀಡುವಷ್ಟೇ ಸಮಾನ ಗೌರವವನ್ನು ರಾಷ್ಟ್ರೀಯ ಗೀತೆಗೂ (National Song) ನೀಡಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ನಿಯಮಗಳನ್ನು ರೂಪಿಸಿದೆ. ಶಾಲಾ-ಕಾಲೇಜು ಅಥವಾ ಕಚೇರಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರೆ, ಈ ನಿಯಮಗಳನ್ನು ಪಾಲಿಸುವುದು ಈಗ ಕಾನೂನಾತ್ಮಕವಾಗಿ ಅಗತ್ಯವಾಗಿದೆ. ವಂದೇಮಾತರಂ ಗೀತೆಯನ್ನು ಪ್ರಸಿದ್ಧ ಬಂಗಾಳಿ ಲೇಖಕ ಬಂಕಿಮ ಚಂದ್ರ ಚಟರ್ಜಿ ಅವರು 1870ರಲ್ಲಿ ರಚಿಸಿದರು.ಇದು ಅವರ ಪ್ರಸಿದ್ಧ ಕಾದಂಬರಿ ಆನಂದಮಠ’ದಲ್ಲಿ (1882) ಪ್ರಕಟವಾಯಿತು. ಈ ಗೀತೆಯು ಸಂಸ್ಕೃತ ಮತ್ತು ಬಂಗಾಳಿ ಭಾಷೆಗಳ ಮಿಶ್ರಣವಾಗಿದೆ.

