ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಿವೆ. ಈ ನಿರ್ಣಯದ ಪ್ರಕ್ರಿಯೆಗೆ ಸ್ಪೀಕರ್ ಅನುಮತಿ ನೀಡಿದ್ದು, ಮಾರ್ಚ್‌ನಲ್ಲಿ ಈ ಕುರಿತು ಚರ್ಚೆಗಳು ನಡೆದು, ಮತದಾನವಾಗುವ ಸಾಧ್ಯತೆ ಇದೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಷಣಕ್ಕೆ ಅವಕಾಶ ನೀಡದ ಹಿನ್ನಲೆಯಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರು ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ.
ಭಾರತದ ಇತಿಹಾಸದಲ್ಲಿ ಲೋಕಸಭೆ ಸ್ಪೀಕರ್ ವಿರುದ್ಧ 3 ಬಾರಿ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಆದರೆ ಯಾವುದೇ ನಿರ್ಣಯ ಅನುಮೋದನೆಗೊಂಡಿಲ್ಲ, ಯಾವುದೇ ಸ್ಪೀಕರ್ ಪದಚ್ಯುತಿಗೊಂಡಿಲ್ಲ.
ಪ್ರಕ್ರಿಯೆ ಹೇಗೆ ನಡೆಯಲಿದೆ?; ಕಾಂಗ್ರೆಸ್ ಸದಸ್ಯರಾದ ಕೆ. ಸುರೇಶ್, ಗೌರವ್ ಗೋಯಲ್ ಮುಂತಾವರನ್ನು ಒಳಗೊಂಡಿರುವ ನಿಯೋಗ ಲೋಕಸಭಾ ಮಹಾ ಕಾರ್ಯರ್ಶಿ ಉತ್ಪಲ್ ಕುಮಾರ್ ಸಿಂಗ್ ಅವರಿಗೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಸಲ್ಲಿಸಿದ್ದಾರೆ. 118 ಸಹಿಗಳನ್ನು ಈ ನಿರ್ಣಯ ಒಳಗೊಂಡಿದೆ. ಸ್ಪೀಕರ್ ಓಂ ಬಿರ್ಲಾ ಈ ನಿರ್ಣಯದ ಪ್ರಕ್ರಿಯಿಗೆ ಸೂಚನೆ ನೀಡಿದ್ದಾರೆ. ಅವಿಶ್ವಾಸ ನಿರ್ಣಯದ ಕುರಿತು ಚರ್ಚೆಗಳು ನಡೆದು, ಮತದಾನ ಮುಗಿಯುವ ತನಕ ಲೋಕಸಭೆ ಕಲಾಪಕ್ಕೆ ತಾವು ಹಾಜರಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತ ಸಂವಿಧಾನದ 94ನೇ ವಿಧಿಯಡಿ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿ, ಈ ಕುರಿತು ಚರ್ಚೆ, ಮತದಾನ ಮಾಡಿದ ಬಳಿಕ ಅವರನ್ನು ಪದಚ್ಯುತಿಗೊಳಿಸಲು ಅವಕಾಶವಿದೆ. ಆದರೆ ದೇಶದಲ್ಲಿ ಇದುವರೆಗೂ ಯಾವುದೇ ಸ್ಪೀಕರ್ ಪದಚ್ಯುತಿಗೊಂಡಿಲ್ಲ.
ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ 14 ದಿನಗಳಲ್ಲಿ ಈ ಕುರಿತು ಚರ್ಚೆಗಳನ್ನು ಮಾಡಬಹುದು. ಅಂದರೆ ಮಾರ್ಚ್ ತಿಂಗಳಿನಲ್ಲಿ ಈಗ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಈ ಅವಿಶ್ವಾಸ ನಿರ್ಣಯಕ್ಕೆ ಸದನದ ಬಹುಮತದ ಒಪ್ಪಿಗೆ ಬೇಕು. ಅಂದರೆ ನಿರ್ಣಯ ಮಂಡಿಸುವಾಗ ಕಲಾಪದಲ್ಲಿ ಹಾಜರಿರುವ ಒಟ್ಟು ಸದಸ್ಯರ ಬಹುಮತವಲ್ಲ.
543 ಸದಸ್ಯರ ಪೈಕಿ 272 ಮತಗಳು ಬೇಕು. ಖಾಲಿ ಇರುವ ಸ್ಥಾನ, ಸದಸ್ಯರ ಅನುಪಸ್ಥಿತಿ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಇದು ಲೋಕಸಭೆ ಸ್ಪೀಕರ್ ಹುದ್ದೆಗೆ ಇರುವ ಘನತೆಯಾಗಿದೆ. ಪದಚ್ಯುತಿಗೆ 14 ದಿನಗಳ ಮೊದಲು ನೋಟಿಸ್ ನೀಡಬೇಕಿದೆ. ಈ ನೋಟಿಸ್‌ನಲ್ಲಿ ಕನಿಷ್ಠ 50 ಸಂಸದರ ಸಹಿ ಇರಬೇಕು, ಇಲ್ಲಾದಲ್ಲಿ ನೋಟಿಸ್ ಅಮಾನ್ಯವಾಗುತ್ತದೆ.
ಲೋಕಸಭಾ ಮಹಾ ಕಾರ್ಯರ್ಶಿ ಈ ನೋಟಿಸ್ ಕುರಿತು ಚರ್ಚೆಗೆ ದಿನವನ್ನು ನಿಗದಿ ಮಾಡುತ್ತಾರೆ. ಆದರೆ ಅಂದು ಸ್ಪೀಕರ್ ಕಲಾಪವನ್ನು ನಡೆಸುವಂತಿಲ್ಲ. ಉಪ ಸ್ಪೀಕರ್ ಇಲ್ಲವೇ ರಾಷ್ಟ್ರಪತಿ ನೇಮಕ ಮಾಡಿದ ಸದಸ್ಯರೊಬ್ಬರು ಪೀಠದಲ್ಲಿ ಕೂತು ಕಲಾಪ ನಿರ್ವಹಣೆ ಮಾಡಬೇಕು.
ಈಗ ಲೋಕಸಭಾ ಮಹಾ ಕಾರ್ಯರ್ಶಿಗಳು ಪ್ರಕ್ರಿಯೆ ಪ್ರಾರಂಭಿಸಲಿದ್ದಾರೆ. ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆದು ಮತಕ್ಕೆ ಹಾಕಲಾಗುತ್ತದೆ. ಅಂಗೀಕಾರವಾದರೆ ಸ್ಪೀಕರ್ ಸ್ಥಾನದಿಂದ ಪದಚ್ಯುತಿಗೊಳ್ಳುತ್ತಾರೆ. ಹೊಸ ಸ್ಪೀಕರ್ ನೇಮಕವಾಗಬೇಕಿದೆ. ಒಂದು ವೇಳೆ ನಿರ್ಣಯ ಬಿದ್ದು ಹೋದರೆ ಸ್ಪೀಕರ್ ಆಗಿ ಓಂ ಬಿರ್ಲಾ ಅವರು ಮುಂದುವರೆಯಲಿದ್ದಾರೆ.
ಭಾರತದ ಇತಿಹಾಸದಲ್ಲಿ ಇದುವರೆಗೂ 1954ರಲ್ಲಿ ಜಿ.ವಿ.ಮವಳಂಕರ್, 1987ರಲ್ಲಿ ಬಲರಾಮ್ ಜಾಖರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. ಆದರೆ ಚರ್ಚೆಯ ಬಳಿಕ ಅದಕ್ಕೆ ಸೋಲಾಗಿತ್ತು. 1966ರಲ್ಲಿ ಹುಕ್ಕಂ ಸಿಂಗ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನೋಟಿಸ್ ನೀಡಲಾಗಿತ್ತು. ಆಗ 50 ಸಂಸದರ ಸಹಿ ಇಲ್ಲದ ಕಾರಣ ಅದು ಅಮಾನ್ಯಗೊಂಡಿತ್ತು.

